

ಡೈಲಿವಾರ್ತೆ:23/ಮಾರ್ಚ್/2026


ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಬಸ್ ಡಿಕ್ಕಿ – ನಾಲ್ವರು ಸಾವು, ಹಲವರಿಗೆ ಗಾಯ

ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾದ ದುರ್ಘಟನೆ ನಡೆದಿದೆ.
ಕೇರಳ ಮೂಲದ ಪಿ.ಕೆ. ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್ ಕೇರಳದಿಂದ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದ ವೇಳೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದ ಪುಟ್ಟಪ್ಪನದೊಡ್ಡಿ ಸಮೀಪ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಚಾಲಕ ನಿದ್ದೆ ಮಂಪರಿನಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಮೃತರೆಲ್ಲರೂ ಕೇರಳ ಮೂಲದವರಾಗಿದ್ದು, ಮೃತರನ್ನು ಕಾಜಿಕೋಟೆಯ ಮೊಹಮ್ಮದ್ ಫರಾನ್ (22), ಸುಲ್ಫಿ (45), ಬೆಂಗಳೂರಿನ ಕಲಾಸಿಪಾಳ್ಯದ ನಿವಾಸಿ ರಶೀದ್ (45) ಹಾಗೂ ಆಡುಗೋಡಿಯ ಅಣ್ಣೆಪಾಳ್ಯದ ಸಾಕೇರ್ ಎಂದು ಗುರುತಿಸಲಾಗಿದೆ.
ಇದಲ್ಲದೆ, ಕೇರಳದ ಕಣ್ಣೂರು ಮೂಲದ ಅಬ್ದುಲ್ ಮತ್ತು ಅಲೇನ್ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಚನ್ನಪಟ್ಟಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.