ಡೈಲಿವಾರ್ತೆ:22/ಮಾರ್ಚ್/2026

ದಾವಣಗೆರೆ – ಬಾಗಲಕೋಟೆ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಘೋಷಣೆ: ಕುಟುಂಬ ರಾಜಕಾರಣದ ನಡುವೆ ತೀವ್ರ ಅಸಮಾಧಾನ, ರಾಜಕೀಯ ಕಾವು ಹೆಚ್ಚಳ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಉಪಚುನಾವಣೆ ಕಾವು ದಿನೇದಿನೇ ಹೆಚ್ಚುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಎರಡು ಪ್ರಮುಖ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕುಟುಂಬ ರಾಜಕಾರಣದ ಚರ್ಚೆಯ ಮಧ್ಯೆಯೇ ಟಿಕೆಟ್ ಹಂಚಿಕೆ ನಡೆದಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ದಿವಂಗತ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಪಕ್ಷ ಅವಕಾಶ ನೀಡಿದೆ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾಬಲ್ಯವಿರುವ ಹಿನ್ನೆಲೆ ಮುಸ್ಲಿಂ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಅಲ್ಪಸಂಖ್ಯಾತ ಮುಖಂಡರು ತಮ್ಮ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರೂ, ಹೈಕಮಾಂಡ್ ಈ ಬೇಡಿಕೆಗೆ ಮಣೆ ಹಾಕದೆ ಸಮರ್ಥ್ ಪರ ತೀರ್ಮಾನಿಸಿದೆ.

ಇನ್ನೊಂದೆಡೆ, ಬಾಗಲಕೋಟೆ ಕ್ಷೇತ್ರದಲ್ಲಿ ದಿವಂಗತ ಶಾಸಕ ಎಚ್.ವೈ. ಮೇಟಿ ಅವರ ಕುಟುಂಬದಲ್ಲಿ ಟಿಕೆಟ್ ವಿಚಾರವಾಗಿ ಉಂಟಾದ ಒಳಜಗಳ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯ ಬಳಿಕ ಕುಟುಂಬದ ಒಮ್ಮತದಿಂದ ಉಮೇಶ್ ಮೇಟಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಕುರುಬ ಸಮುದಾಯದ ಮತಬ್ಯಾಂಕ್ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ನಡುವೆ ಬಿಜೆಪಿ ಪಕ್ಷವೂ ಎರಡೂ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ ಹಾಗೂ ದಾವಣಗೆರೆ ದಕ್ಷಿಣದಲ್ಲಿ ಶ್ರೀನಿವಾಸ ದಾಸಕರಿಯಪ್ಪ ಕಣಕ್ಕಿಳಿದಿದ್ದಾರೆ.

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಕುಟುಂಬ ರಾಜಕಾರಣ, ಸಮುದಾಯ ಸಮೀಕರಣ ಮತ್ತು ಪಕ್ಷಾಂತರ ಸಂಘರ್ಷಗಳ ನಡುವೆ ಈ ಉಪಚುನಾವಣೆ ರಾಜ್ಯ ರಾಜಕೀಯದಲ್ಲಿ ಮಹತ್ವದ ತಿರುವು ತರಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.