

ಡೈಲಿವಾರ್ತೆ:23/ಮಾರ್ಚ್/2026


ತುಂಗಭದ್ರಾ ನದಿಯಲ್ಲಿ ಜಲಸಮಾಧಿಯಾದ ಅಣ್ಣ-ತಮ್ಮ: ತಂದೆಯ ಕಣ್ಣೆದುರಲ್ಲೇ ಸಂಭವಿಸಿತು ಘೋರ ದುರಂತ!

ದಾವಣಗೆರೆ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ದಾರುಣ ಘಟನೆಯೊಂದು ಸಂಭವಿಸಿದೆ. .
ಘಟನೆಯ ವಿವರ:
ಹಲವಾಗಲು ಗ್ರಾಮದ ಮನು (19) ಹಾಗೂ ಪ್ರಜ್ವಲ್ (18) ಮೃತಪಟ್ಟ ದುರ್ದೈವಿಗಳು. ಇವರು ತನ್ನ ತಂದೆ ಮಂಜಪ್ಪ ಹಾಗೂ ಇನ್ನೊಬ್ಬ ಸಹೋದರ ಚಿರಂಜೀವಿ ಅವರೊಂದಿಗೆ ನದಿಗೆ ಈಜಲು ತೆರಳಿದ್ದರು. ಈ ವೇಳೆ ಈಜುವ ಉತ್ಸಾಹದಲ್ಲಿದ್ದ ಇಬ್ಬರು ಸಹೋದರರು ನದಿಯ ಆಳದ ಅರಿವಿಲ್ಲದೆ ಆಯತಪ್ಪಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಮೂವರು ಪುತ್ರರು ನೀರಿನಲ್ಲಿ ಸಿಲುಕಿದ್ದನ್ನು ಕಂಡ ತಂದೆ ಮಂಜಪ್ಪ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಮಯಪ್ರಜ್ಞೆ ಮೆರೆದು ಕೊನೆಯ ಮಗ ಚಿರಂಜೀವಿಯನ್ನು ಹೇಗೋ ಮಾಡಿ ದಡಕ್ಕೆ ಎಳೆದು ತಂದಿದ್ದಾರೆ. ಆದರೆ, ಅಷ್ಟರಲ್ಲೇ ಅಣ್ಣ-ತಮ್ಮಂದಿರಾದ ಮನು ಮತ್ತು ಪ್ರಜ್ವಲ್ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಣೆದುರಲ್ಲೇ ಮಾಯವಾಗಿದ್ದಾರೆ.
ಕುಟುಂಬಸ್ಥರ ಆಕ್ರಂದನ:
ಒಂದೇ ಮನೆಯ ಇಬ್ಬರು ಯುವಕರು ಸಾವನ್ನಪ್ಪಿದ್ದರಿಂದ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಕಂಬನಿ ಮಿಡಿದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಹಲವಾಗಲು ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.