ಡೈಲಿವಾರ್ತೆ:01/ಏಪ್ರಿಲ್ /2026

ಸಾಸ್ತಾನ ಕಿಡ್ನಾಪ್ ಪ್ರಕರಣ:
ಕೋಕಾ ಕಾಯಿದೆಯಡಿ ಪ್ರಮುಖ ಆರೋಪಿಗಳ ಬಂಧನ

ಕುಂದಾಪುರ: ಸಾಸ್ತಾನದಲ್ಲಿ ನಡೆದಿದ್ದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ:
ಮೋಹನ ದಾಸ್ ಶೆಟ್ಟಿ ಅವರ ಮಗ ತೇಜಸ್‌ನ್ನು ಅಪರಿಚಿತರು ಅಪಹರಿಸಿರುವ ಬಗ್ಗೆ ಸ್ನೇಹಿತ ಪ್ರಜ್ವಲ್ ಮೂಲಕ ಮಾಹಿತಿ ಲಭ್ಯವಾಗಿತ್ತು. ಸಾಸ್ತಾನದಲ್ಲಿರುವ ಕೋಸ್ಟಲ್ ಪ್ಯಾರಡೈಸ್ ಹೋಟೆಲ್ ಎದುರು ಘಟನೆ ನಡೆದಿದ್ದು, ಸ್ಥಳಕ್ಕೆ ತೆರಳಿದಾಗ ತೇಜಸ್‌ನ ಕಾರು ಅಲ್ಲೇ ಪತ್ತೆಯಾಗಿತ್ತು.
ಪ್ರಜ್ವಲ್‌ಗೆ ತೇಜಸ್‌ನ ವಾಟ್ಸಪ್‌ನಿಂದ ಬಂದ ಆಡಿಯೋ ಕಾಲ್‌ನಲ್ಲಿ, ಮನೋಜ್ ಕೋಡಿಕೆರೆ ಸೂಚನೆಯಂತೆ ಕೆಲವರು ತನ್ನನ್ನು ಅಪಹರಿಸಿರುವುದಾಗಿ ತೇಜಸ್ ತಿಳಿಸಿದ್ದಾನೆ. ನಂತರ ಅಪರಿಚಿತರು ವಾಟ್ಸಪ್ ಮೂಲಕ ಸಂಪರ್ಕಿಸಿ ಮೊದಲು ₹50 ಲಕ್ಷ, ಬಳಿಕ ₹3 ಕೋಟಿ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ವೇಳೆ ಆರೋಪಿಗಳು ಸಂಘಟಿತವಾಗಿ ಅಪರಾಧ ನಡೆಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ KCOCA ಕಾಯಿದೆ 2000 ಅನ್ವಯಿಸಲಾಗಿದೆ.

ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ 7 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇನ್ನೂ ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ್ ಕೋಡಿಕೆರೆ ಹಾಗೂ ಚೇತನ್ ಪಡೀಲ್ ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಇವರ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ.

ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಡಿವೈಎಸ್‌ಪಿ ಹೆಚ್.ಡಿ. ಕುಲಕರ್ಣಿ (ಮೊಬೈಲ್: 9480805422) ಅವರಿಗೆ ತಿಳಿಸಲು ವಿನಂತಿಸಲಾಗಿದೆ. ಮಾಹಿತಿ ನೀಡುವವರಿಗೆ ₹50,000 ಬಹುಮಾನ ಘೋಷಿಸಲಾಗಿದ್ದು, ಮಾಹಿತಿದಾರರ ಗುರುತು ಗೌಪ್ಯವಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.