

ಡೈಲಿವಾರ್ತೆ:02/ಏಪ್ರಿಲ್ /2026


ಗ್ರಾಮೀಣ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಬಾರ್ಕೂರಿನಲ್ಲಿ ‘ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು’ ಆರಂಭ – ಏ.5ರಂದು ವಿದ್ಯಾರ್ಥಿವೇತನ ಪರೀಕ್ಷೆ

ಬಾರ್ಕೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣವನ್ನು ತಲುಪಿಸುವ ಮಹತ್ವಾಕಾಂಕ್ಷಿ ಹೆಜ್ಜೆಯಾಗಿ ಬಾರ್ಕೂರು ಎಜುಕೇಶನಲ್ ಸೊಸೈಟಿ ಹಾಗೂ ಕುಂದಾಪುರದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕೈಜೋಡಿಸಿ ‘ಬಾರ್ಕೂರು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು’ ಆರಂಭಿಸಿವೆ. ಇದರ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಉದ್ದೇಶದಿಂದ ಏಪ್ರಿಲ್ 5ರಂದು ವಿಶೇಷ ಪರೀಕ್ಷೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.
ನಗರ ಮಟ್ಟದ ತರಬೇತಿ ಇನ್ಮುಂದೆ ಬಾರ್ಕೂರಿನಲ್ಲಿಯೇ: ಬಿ. ಶಾಂತಾರಾಮ ಶೆಟ್ಟಿ

ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ, “1946ರಿಂದ ಗ್ರಾಮೀಣ ಶಿಕ್ಷಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ನಮ್ಮ ಸಂಸ್ಥೆ, ಇಂದಿನ ಸ್ಪರ್ಧಾತ್ಮಕ ಯುಗದ ಅಗತ್ಯಗಳನ್ನು ಮನಗಂಡು ಸುಜ್ಞಾನ ಟ್ರಸ್ಟ್ ಜೊತೆ ಕೈಜೋಡಿಸಿದೆ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ನಗರ ಮಟ್ಟದ ಗುಣಮಟ್ಟದ ಶಿಕ್ಷಣ ಲಭ್ಯವಾಗಲಿದೆ,” ಎಂದು ತಿಳಿಸಿದರು.
ಶೇ. 75ರವರೆಗೆ ರಿಯಾಯಿತಿ ಮತ್ತು ಉಚಿತ ಶಿಕ್ಷಣದ ಸೌಲಭ್ಯ: ಡಾ. ರಮೇಶ್ ಶೆಟ್ಟಿ

ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ತಲುಪಿಸುವ ಮಹತ್ವಾಕಾಂಕ್ಷಿ ಪ್ರಯತ್ನವಾಗಿ ಬಾರ್ಕೂರು ಎಜುಕೇಶನಲ್ ಸೊಸೈಟಿ (ರಿ.) ಹಾಗೂ ಕುಂದಾಪುರದ ಪ್ರತಿಷ್ಠಿತ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕೈಜೋಡಿಸಿವೆ. ಈ ಹಿನ್ನೆಲೆಯಲ್ಲಿ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗಾಗಿ ಬೃಹತ್ ವಿದ್ಯಾರ್ಥಿವೇತನ ಪರೀಕ್ಷೆ ಆಯೋಜಿಸಲಾಗಿದ್ದು, ಇದು ಗ್ರಾಮೀಣ ಪ್ರತಿಭೆಗಳ ಭವಿಷ್ಯಕ್ಕೆ ಹೊಸ ದಿಕ್ಕು ತೋರಿಸುವ ಹೆಜ್ಜೆಯಾಗಿದೆ.
“ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಅಡಚಣೆಯಿಂದ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಮುಖ್ಯ ಉದ್ದೇಶ. ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಕಾಲೇಜು ಶುಲ್ಕದಲ್ಲಿ ಶೇ.75ರವರೆಗೆ ರಿಯಾಯಿತಿ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲು ಟ್ರಸ್ಟ್ ಬದ್ಧವಾಗಿದೆ ಎಂದು ಡಾ. ರಮೇಶ್ ಶೆಟ್ಟಿ ತಿಳಿಸಿದರು.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ತಜ್ಞರ ಮಾರ್ಗದರ್ಶನ: ಭರತ್ ಶೆಟ್ಟಿ

ಇದೇ ವೇಳೆ ಟ್ರಸ್ಟ್ ಖಜಾಂಚಿ ಭರತ್ ಶೆಟ್ಟಿ ಮಾಹಿತಿ ನೀಡಿ “ಇದುವರೆಗೆ CET, NEET, JEE ಹಾಗೂ CA, CS ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ವಿದ್ಯಾರ್ಥಿಗಳು ನಗರಗಳಿಗೆ ತೆರಳಬೇಕಾಗಿತ್ತು. ಆದರೆ ಸುಜ್ಞಾನ ಟ್ರಸ್ಟ್ ಕಳೆದ ಐದು ವರ್ಷಗಳಿಂದ ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡುತ್ತಿದ್ದು, ಈಗ ಅದೇ ಗುಣಮಟ್ಟದ ತರಬೇತಿಯನ್ನು ಬಾರ್ಕೂರಿನಲ್ಲಿಯೇ ನೀಡಲು ಮುಂದಾಗಿದೆ. ಇದು ಗ್ರಾಮೀಣ ವಿದ್ಯಾರ್ಥಿಗಳ ಸಮಯ ಮತ್ತು ವೆಚ್ಚವನ್ನು ಉಳಿಸುವುದರ ಜೊತೆಗೆ ಸ್ಥಳೀಯ ಮಟ್ಟದಲ್ಲಿಯೇ ಉನ್ನತ ಸಾಧನೆಗೆ ದಾರಿ ತೆರೆದಿಡಲಿದೆ ಎಂದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಮೂರು ದಶಕಕ್ಕೂ ಅಧಿಕ ಅನುಭವ ಹೊಂದಿರುವ ಹಾಗೂ ಪಿಯು ಕಾಲೇಜುಗಳಲ್ಲಿ 25 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಭೌತಶಾಸ್ತ್ರ ಪಿಎಚ್‌ಡಿ ಪದವೀಧರರಾದ ಡಾ. ರಮೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದೆ. ಇವರು ಸಾವಿರಾರು ವಿದ್ಯಾರ್ಥಿಗಳ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕನಸುಗಳಿಗೆ ದಾರಿದೀಪವಾಗಿರುವುದು ವಿಶೇಷ. ಇನ್ನೊಂದೆಡೆ, ಸಿಎ ಫೌಂಡೇಶನ್ ಹಾಗೂ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಗಳಲ್ಲಿ ಅಖಿಲ ಭಾರತ ಮಟ್ಟದಲ್ಲಿ ಉನ್ನತ ರ‍್ಯಾಂಕ್ ಗಳಿಸಿರುವ ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ಭರತ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತರಬೇತಿ ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ಭರತ್ ಶೆಟ್ಟಿ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ಸಂಚಾಲಕರಾದ ರಾಜಾರಾಮ ಶೆಟ್ಟಿ, ಬಿ. ರಾಮಚಂದ್ರ ಕಾಮತ್, ರಾಜ್ ಗೋಪಾಲ್ ನಂಬಿಯಾರ್ ಹಾಗೂ ಸದಸ್ಯರಾದ ಎಸ್. ಜಯರಾಮ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಮಟಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಪರೀಕ್ಷೆಯ ವಿವರಗಳು:
ಏಪ್ರಿಲ್ 5, 2026ರಂದು (ಭಾನುವಾರ) ಬೆಳಿಗ್ಗೆ 9:30ಕ್ಕೆ ಬಾರ್ಕೂರಿನ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ SSLC, CBSE ಅಥವಾ ICSE ಪರೀಕ್ಷೆ ಬರೆದ ವಿದ್ಯಾರ್ಥಿಗಳು ಭಾಗವಹಿಸಲು ಅರ್ಹರು. ವಿದ್ಯಾರ್ಥಿಗಳು ಆಧಾರ್ ಕಾರ್ಡ್, ಪೆನ್, ಪೆನ್ಸಿಲ್ ಹಾಗೂ ಎಕ್ಸಾಮ್ ಪ್ಯಾಡ್ ತರತಕ್ಕದ್ದು. ಪ್ರಶ್ನೆಗಳು SSLC ಪಠ್ಯಕ್ರಮದ ಆಧಾರದಲ್ಲಿರುತ್ತವೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತ ಪೋಷಕರು ಹಾಗೂ ವಿದ್ಯಾರ್ಥಿಗಳು ಬಾರ್ಕೂರು ಎಜುಕೇಶನಲ್ ಸೊಸೈಟಿ ಅಥವಾ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ:
6366976744, 9964291755, 8217527362.