

ಡೈಲಿವಾರ್ತೆ:01/ಏಪ್ರಿಲ್ /2026


ಫಲ್ಗುಣಿ ನದಿಯಲ್ಲಿ ದೋಣಿ ದುರಂತ: ಇಬ್ಬರು ಯುವಕರು ನೀರುಪಾಲು, ಓರ್ವನ ರಕ್ಷಣೆ

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ ಬೈಲ್ ಪ್ರದೇಶದ ಫಲ್ಗುಣಿ ನದಿಯಲ್ಲಿ ದೋಣಿ ಮಗುಚಿ ಇಬ್ಬರು ಯುವಕರು ನೀರುಪಾಲಾದ ದಾರುಣ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ.
ಮೃತಪಟ್ಟವರನ್ನು ಕುಂಜತ್ ಬೈಲ್ ನಿವಾಸಿಗಳಾದ ಗಣೇಶ್ (28) ಹಾಗೂ ರಾಯಲ್ (27) ಎಂದು ಗುರುತಿಸಲಾಗಿದೆ.
ಬುಧವಾರ ನಸುಕಿನ ಸುಮಾರು 2 ಗಂಟೆ ವೇಳೆಗೆ ಮೂವರು ಸ್ನೇಹಿತರು ಮೀನು ಹಿಡಿಯುವ ಉದ್ದೇಶದಿಂದ ಸಣ್ಣ ದೋಣಿಯಲ್ಲಿ ನದಿಗೆ ತೆರಳಿದ್ದರು. ನದಿ ಮಧ್ಯಭಾಗದಲ್ಲಿ ದೋಣಿ ಮಗುಚಿ ಮೂವರೂ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಈಜಲು ಬಾರದ ಗಣೇಶ್ ಹಾಗೂ ರಾಯಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಪೈಕಿ ನಿತೇಶ್ (29) ಎಂಬ ಯುವಕ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಶೋಧ ಕಾರ್ಯ ಕೈಗೊಂಡಿದ್ದು, ಮಧ್ಯಾಹ್ನ ವೇಳೆಗೆ ಗಣೇಶ್ ಅವರ ಮೃತದೇಹ ಪತ್ತೆಯಾಗಿದೆ. ಇನ್ನೂ ರಾಯಲ್ ಅವರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.