

ಡೈಲಿವಾರ್ತೆ:02/ಏಪ್ರಿಲ್ /2026


ಸಿಎಂ ಆದ ಮೊದಲ ಕ್ಯಾಬಿನೆಟ್‌ನಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಗೆ: ಯತ್ನಾಳ್ ವಿವಾದಾತ್ಮಕ ಹೇಳಿಕೆ

ವಿಜಯಪುರ: ಹನುಮ ಜಯಂತಿಯ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ನಾನು ಮುಖ್ಯಮಂತ್ರಿ ಆದರೆ, ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಮುಸ್ಲಿಂ ಸಮುದಾಯವನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ ಯೋಗಿ ಆದಿತ್ಯನಾಥ ಮಾದರಿಯ ಆಡಳಿತ ನಡೆಸುತ್ತೇನೆ. ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ನಾನು ಕೇಳುವುದಿಲ್ಲ. ಅವರು ಸ್ವತಃ ನನ್ನನ್ನು ಕರೆಯುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಇದಲ್ಲದೆ ಮುಸ್ಲಿಮರನ್ನು ಹೊರತುಪಡಿಸಿ ಮರಾಠರು, ಬ್ರಾಹ್ಮಣರು, ಕ್ಷತ್ರಿಯರು ಸೇರಿದಂತೆ ಇತರ ಸಮುದಾಯಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುತ್ತೇನೆ ಎಂದೂ ಹೇಳಿದರು.
ರಾಜಕೀಯ ಟೀಕೆಯನ್ನೂ ಮುಂದುವರಿಸಿದ ಯತ್ನಾಳ್, ಸಚಿವ ಎಂ.ಬಿ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು. ಸ್ವಾಭಿಮಾನ ಇದ್ದರೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಬಾರದು ಎಂದು ಅವರು ಟಾಂಗ್ ನೀಡಿದರು.
ಈ ಹೇಳಿಕೆಗಳು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಇನ್ನಷ್ಟು ಚರ್ಚೆ ಹಾಗೂ ಪ್ರತಿಕ್ರಿಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.