

ಡೈಲಿವಾರ್ತೆ:02/ಏಪ್ರಿಲ್ /2026


‘ಮಣೂರು ಫ್ರೆಂಡ್ಸ್ (ರಿ.)’ ಸಂಸ್ಥೆಯ ರಜತ ಸಂಭ್ರಮ: “ಬಡತನದಿಂದ ಪದ್ಮಶ್ರೀವರೆಗೆ”: ಜನರ ಪ್ರೀತಿಯೇ ನನ್ನ ಶಕ್ತಿ – ಹರೇಕಳ ಹಾಜಬ್ಬ ಭಾವುಕ ನುಡಿ


ಕೋಟ: ರೂಪಾಯಿ ಬೆಲೆ ಇಲ್ಲದ ಸಾಮಾನ್ಯನಾದ ನನ್ನನ್ನು ಪದ್ಮಶ್ರೀವರೆಗೆ ತಲುಪಿಸಿದ್ದು ಜನರ ಪ್ರೀತಿ ಮತ್ತು ಆಶೀರ್ವಾದ ಎಂದು ಅಕ್ಷರ ಸಂತ ಹರೇಕಳ ಹಾಜಬ್ಬ ಭಾವುಕರಾಗಿ ಹೇಳಿದರು.
ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಪಂಚಮುಖಿ ಹೇರಂಭ ಮಹಾಗಣಪತಿ ದೇವಸ್ಥಾನದ ಬ್ರಹ್ಮ ರಥೋತ್ಸವದ ಅಂಗವಾಗಿ ‘ಮಣೂರು ಫ್ರೆಂಡ್ಸ್ (ರಿ.)’ ಸಂಸ್ಥೆಯ ರಜತ ಸಂಭ್ರಮದಲ್ಲಿ ವಿಶೇಷ ಗೌರವ ಸ್ವೀಕರಿಸಿ ಮಾತನಾಡಿದ ಅವರು ನಾನೊಬ್ಬ ಶಾಲೆಯ ಬಾಗಿಲು ನೋಡದ ಸಾಮಾನ್ಯ ಮನುಷ್ಯ. ಕಿತ್ತಳೆ ಹಣ್ಣು ಮಾರಿ ಜೀವನ ಸಾಗಿಸುತ್ತಿದ್ದ ಬಡವನಿಗೆ ದೇಶದ ಅತ್ಯುನ್ನತ ಪುರಸ್ಕಾರ ಸಿಗಲು ಕಾರಣ ಜನರ ಆಶೀರ್ವಾದ.
ಇಂದು ಮಣೂರಿನ ಈ ಪವಿತ್ರ ಕ್ಷೇತ್ರದಲ್ಲಿ ನನ್ನನ್ನು ಗೌರವಿಸುತ್ತಿರುವುದು ನನ್ನ ಸುಕೃತ,” ಎಂದು ಅಕ್ಷರ ಸಂತ, ಪದ್ಮಶ್ರೀ ಹರೇಕಳ ಹಾಜಬ್ಬ ಭಾವುಕರಾಗಿ ನುಡಿದರು.

ತಮ್ಮ ಭಾಷಣದುದ್ದಕ್ಕೂ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಹಾಜಬ್ಬ ಅವರು, “2019ರಲ್ಲಿ ಕೋಟದ ಪಂಚವರ್ಣ ಸಂಸ್ಥೆಯ ಕಾರ್ಯಕ್ರಮಕ್ಕೆ ಬಂದಿದ್ದಾಗ ಅಂದಿನ ಸಚಿವರು, ಇಂದಿನ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ನನ್ನ ಶಾಲೆಯ ಪರಿಸ್ಥಿತಿಯನ್ನು ಕಂಡು ಸ್ಥಳದಲ್ಲೇ 10 ಲಕ್ಷ ರೂಪಾಯಿ ದೇಣಿಗೆ ಘೋಷಿಸಿದ್ದರು. ಆ ಹಣ ನನ್ನ ಶಾಲೆಯ ಅಭಿವೃದ್ಧಿಗೆ ದೊಡ್ಡ ಶಕ್ತಿಯಾಯಿತು. ಇಂದು ಅವರದೇ ಕ್ಷೇತ್ರದಲ್ಲಿ ನನಗೆ ಸನ್ಮಾನವಾಗುತ್ತಿರುವುದು ಸಂತಸ ತಂದಿದೆ,” ಎಂದು ಕೃತಜ್ಞತೆ ಸಲ್ಲಿಸಿದರು.

ತಮ್ಮ ಬಾಲ್ಯದ ಕಷ್ಟಗಳನ್ನು ನೆನಪಿಸಿಕೊಂಡ ಅವರು, “1974ರ ಪ್ರವಾಹದಲ್ಲಿ ನಮ್ಮ ಮನೆ ಮಣ್ಣು ಪಾಲಾದಾಗ, ಈಗಿನ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರ ತಂದೆ ದಿವಂಗತ ಯು.ಟಿ. ಫರೀದ್ ಅವರು ನಮಗೆ ಆಸರೆಯಾಗಿದ್ದರು. 28 ಮಕ್ಕಳೊಂದಿಗೆ ಅಂದು ಆರಂಭವಾದ ಶಾಲೆ ಇಂದು ಹೆಮ್ಮರವಾಗಿ ಬೆಳೆದಿದೆ. ಬಾರ್ಕೂರಿನ ಅಚ್ಚಣ್ಣ ಶೆಟ್ಟರಂತಹ ಮಹನೀಯರ ಭೂಮಿಯಲ್ಲಿ ಬೆಳೆದವನು ನಾನು. ಅಂದು ಬಡತನದಲ್ಲಿ ಬೆಂದ ನನಗೆ ಇಂದು ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ. ಇದೆಲ್ಲವೂ ನಾನು ಕಂಡೂ ಕಾಣದ ಕನಸು ಎಂದರು.
ಈ ಸುಂದರ ವೇದಿಕೆಯಲ್ಲಿ ನನ್ನಂತಹ ಒಬ್ಬ ಬಡವನನ್ನು ಕರೆಸಿ, ಪ್ರೀತಿಯಿಂದ ಸನ್ಮಾನಿಸಿದ ಮಣೂರು ಫ್ರೆಂಡ್ಸ್ ಆಡಳಿತ ಮಂಡಳಿಗೆ ನಾನು ಋಣಿಯಾಗಿದ್ದೇನೆ. ಬಡತನ ಎನ್ನುವುದು ಶಾಪವಲ್ಲ, ಪ್ರಾಮಾಣಿಕತೆಯಿಂದ ದುಡಿದರೆ ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ ಎಂದು ಕಿಕ್ಕಿರಿದು ತುಂಬಿದ್ದ ಜನಸ್ತೋಮಕ್ಕೆ ಕಿವಿಮಾತು ಹೇಳಿದರು.
ಯುವಶಕ್ತಿ ಒಂದಾದರೆ ಊರಿನ ಅಭಿವೃದ್ಧಿ ಸಾಧ್ಯ: ಆನಂದ್ ಸಿ. ಕುಂದರ್ ಕರೆ

ಮಣೂರು: ಯುವಕರು ಸಂಘಟಿತರಾಗಿ ಕೆಲಸ ಮಾಡಿದರೆ ಊರಿನ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಆನಂದ್ ಸಿ. ಕುಂದರ್ ಹೇಳಿದರು. ಅವರು ಮಣೂರು ಫ್ರೆಂಡ್ಸ್’ ಸಂಸ್ಥೆಯ ರಜತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಯುವಶಕ್ತಿ ದೇಶದ ದೊಡ್ಡ ಆಸ್ತಿಯಾಗಿದ್ದು, ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕು. ರಜತ ಸಂಭ್ರಮ ಆಚರಿಸುತ್ತಿರುವ ಮಣೂರು ಫ್ರೆಂಡ್ಸ್ ಭವಿಷ್ಯದಲ್ಲಿ ಸುವರ್ಣ ಮತ್ತು ಶತಮಾನೋತ್ಸವದತ್ತ ಸಾಗಬೇಕು ಎಂದು ಆಶಿಸಿದರು. ಯುವಕರು ದಾರಿ ತಪ್ಪದೆ ಸಮಾಜದ ಅಭಿವೃದ್ಧಿಗೆ ಕೈಜೋಡಿಸಿದಾಗ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯವೆಂದು ಹೇಳಿದರು. ಈ ಸಂದರ್ಭದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ ಅವರ ಸಾಧನೆಯನ್ನು ಮಾದರಿಯಾಗಿ ಉಲ್ಲೇಖಿಸಿದ ಅವರು, ಸಮಾಜದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವುದು ಅಗತ್ಯವೆಂದರು.
ಧಾರ್ಮಿಕ ಕಾರ್ಯಕ್ರಮಗಳ ಜೊತೆ ಸಾಮಾಜಿಕ ಜವಾಬ್ದಾರಿ ಶ್ಲಾಘನೀಯ: ಶಿವರಾಮ್ ಶೆಟ್ಟಿ ಮಲ್ಯಾಡಿ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವುದು ಶ್ಲಾಘನೀಯ ಕಾರ್ಯವೆಂದು ಉದ್ಯಮಿ ಶಿವರಾಮ್ ಶೆಟ್ಟಿ ಮಲ್ಯಾಡಿ ಹೇಳಿದರು. ಯುವಕರು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಪ್ರಶಂಸನೀಯವೆಂದರು.
ಸಂಘಟಿತ ಶಕ್ತಿಯಿಂದ ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಬಹುದು. ರಥೋತ್ಸವದಂತಹ ಧಾರ್ಮಿಕ ಸಂಭ್ರಮದ ನಡುವೆ ಊರಿನ ಅಭಿವೃದ್ಧಿಯ ಬಗ್ಗೆ ಯೋಚಿಸಿ ಕಾರ್ಯನಿರ್ವಹಿಸುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.



ಈ ಸಂದರ್ಭದಲ್ಲಿ ಅಕ್ಷರ ಸಂತ ಡಾ.ಹರೇಕಳ ಹಾಜಬ್ಬ ಇವರಿಗೆ ರಜತ ಸಂಭ್ರಮ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸ್ಥಳೀಯರಾದ ರವೀಂದ್ರ ಪೈ ಇವರಿಗೆ ಸಾಧಕ ಪುರಸ್ಕಾರ, ನಿಧಿ ಪೈಗೆ ಪ್ರತಿಭಾ ಪುರಸ್ಕಾರ, ಸ್ಥಳೀಯ ಸಾಧಕರಾದ ಕಂಬಳ ಕ್ಷೇತ್ರದ ರಘುರಾಮ ಶೆಟ್ಟಿ,ಶಿವರಾಮ ಶೆಟ್ಟಿ ನಡುಬೆಟ್ಟು, ಮೆಸ್ಕಾಂ ಉಮ್ಮರ್ ಸಾಹೇಬ್, ನಿರ್ಮಲ ಟೀಚರ್ ಇವರಿಗೆ ವಿಶೇಷ ಅಭಿನಂದನೆ,ಕೋಟದ ಪಂಚವರ್ಣ ಸಂಘಟನೆಗೆ ಸಂಘಟನಾ ಪುರಸ್ಕಾರ,ಮಣೂರು ಫ್ರೆಂಡ್ಸ್ ಹುಟ್ಟಿಗೆ ಕಾರಣಿಭೂತರಾದ ಗೌರವಾಧ್ಯಕ್ಷ ಸುರೇಶ್ ಆಚಾರ್ ಇವರಿಗೆ ಹುಟ್ಟೂರ ಸನ್ಮಾನ ನೀಡಿ ಗೌರವಿಸಲಾಯಿತು.
ಅಶಕ್ತ ಹಾಗೂ ಅನಾರೋಗ್ಯ ಪೀಡಿತರಿಗೆ ನೆರವು, ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ನೆರವನ್ನು ಹಸ್ತಾಂತರಿಸಲಾಯಿತು.
ಮಣೂರು ದೇವಳದ ಧ್ವಜಸ್ತಂಭ ಪುನರ್ ಪ್ರತಿಷ್ಠಾಪನೆಗೆ ಭಕ್ತರ ಸಹಕಾರ ಅಗತ್ಯ – ಸತೀಶ್ ಹೆಚ್. ಕುಂದರ್

ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಐತಿಹಾಸಿಕ ಧ್ವಜಸ್ತಂಭ ಶಿಥಿಲಗೊಂಡಿರುವ ಹಿನ್ನೆಲೆ ಅದರ ಪುನರ್ ಪ್ರತಿಷ್ಠಾಪನೆಗಾಗಿ ಭಕ್ತರ ಸಹಕಾರ ಅಗತ್ಯವಿದೆ. ಧ್ವಜಸ್ತಂಭ ಬದಲಾವಣೆಗೆ ಸುಮಾರು 15 ಲಕ್ಷ ರೂಪಾಯಿ ವೆಚ್ಚವಾಗುವ ಅಂದಾಜಿದ್ದು, ರಥೋತ್ಸವದ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಧ್ವಜಸ್ತಂಭ ಬಾಗಿರುವುದರಿಂದ ಭದ್ರತಾ ದೃಷ್ಟಿಯಿಂದ ತುರ್ತು ಕ್ರಮ ಅವಶ್ಯಕವಾಗಿದ್ದು, ಗ್ರಾಮಸ್ಥರು ಶಕ್ತಿಗನುಗುಣವಾಗಿ ನೆರವು ನೀಡುವಂತೆ ಮನವಿ ಮಾಡಿದರು.
ಸಾಧಕರ ಕುರಿತು ಮೆಚ್ಚುಗೆಯ ಮಾತು:
ಕಾರ್ಯಕ್ರಮದಲ್ಲಿ ಸನ್ಮಾನಿತರಾದವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಸತೀಶ್ ಕುಂದರ್ ಅವರು, “ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಅವರ ಸಾಧನೆ ಅಸಾಧಾರಣವಾದುದು. ಶೂನ್ಯದಿಂದ ವಿಶ್ವವೇ ಗುರುತಿಸುವಂತಹ ಕೆಲಸ ಮಾಡಬಹುದು ಎಂಬುದಕ್ಕೆ ಅವರೇ ಸಾಕ್ಷಿ. ಅದೇ ರೀತಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಗಳಿಸಿದ ನಿಧಿ ಪೈ ಅವರ ಆತ್ಮವಿಶ್ವಾಸ ನಮಗೆಲ್ಲರಿಗೂ ಮಾದರಿ. ಆರಂಭದಲ್ಲಿ ಸ್ವಲ್ಪ ಅಂಕ ಕಡಿಮೆಯಾದರೂ, ತಾನು ಸರಿಯಾಗಿ ಬರೆದಿದ್ದೇನೆ ಎಂಬ ಛಲದಿಂದ ರೀ-ವ್ಯಾಲ್ಯೂಯೇಷನ್ ಹಾಕಿಸಿ 625ಕ್ಕೆ 625 ಅಂಕ ಪಡೆದ ಆಕೆಯ ಸಾಧನೆ ಅಭಿನಂದನೀಯ,” ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ರಘುರಾಮ್ ಶೆಟ್ಟಿ ಕಮಲಗಟ್ಟೆ, ಅಂಗನವಾಡಿ ಶಿಕ್ಷಕಿ ನಿರ್ಮಲಾ ಟೀಚರ್ ಹಾಗೂ ಮೆಕ್ಯಾನಿಕ್ ಉಮರ್ ಅವರ ಪ್ರಾಮಾಣಿಕ ಸೇವೆಯನ್ನು ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಶ್ಲಾಘಿಸಿದರು.
ಸಭಾಧ್ಯಕ್ಷತೆಯನ್ನು ಮಣೂರು ಫ್ರೆಂಡ್ಸ್ನ ಗೌರವ ಸಲಹೆಗಾರ ಸುಬ್ರಾಯ ಆಚಾರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಗಣೇಶ್ ಸಿಲ್ಕ್ಸ್ ಅನಂತ್ ನಾಯಕ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ರಾಘವೇಂದ್ರ ಆಚಾರ್, ಉದ್ಯಮಿ ನವೀನ್ ಶೆಟ್ಟಿ ಪಟೇಲರ ಮನೆ, ಸಂತೋಷ್ ಸುವರ್ಣ ಉಪಸ್ಥಿತರಿದ್ದರು. ಮಣೂರು ಫ್ರೆಂಡ್ಸ್ ಸ್ಥಾಪಕ ಸದಸ್ಯರಾದ ಪ್ರಭಾಕರ್ ಆಚಾರ್ ಸ್ವಾಗತಿಸಿದರು. ಫ್ರೆಂಡ್ಸ್ ರಜತ ಸಾಧನೆಯನ್ನು ವಿಟಿ ಮೂಲಕ ಪ್ರಚುರಪಡಿಸಲಾಯಿತು.
ಪ್ರಣುತ್ ಗಾಣಿಗ ಕಾರ್ಯಕ್ರಮವನ್ನು ನಿರೂಪಿಸಿದರು.
ರವೀಂದ್ರ ಕೋಟ ವಂದಿಸಿದರು.
ಸುಧಾಕರ ಆಚಾರ್,ದಿನೇಶ್ ಆಚಾರ್ ಮತ್ತಿತರರು ಸಹಕರಿಸಿದರು.
ಕಾರ್ಯಕ್ರಮದ ನಂತರ ಬೆಂಗಳೂರು ಪ್ರಸಿದ್ಧ ಗಾಯಕರಿಂದ ಆರ್ಕೆಸ್ಟ್ರಾ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರದ ಭಾಗವಾಗಿ ಸ್ಥಳೀಯ ರಾಮಪ್ರಸಾದ ಅಂಗನವಾಡಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿದರು.