

ಡೈಲಿವಾರ್ತೆ:02/ಏಪ್ರಿಲ್ /2026


ಕೋಟ: ಖ್ಯಾತ ಚರ್ಮರೋಗ ತಜ್ಞ ಡಾ. ಎಸ್.ಎನ್. ವಾದಿರಾಜ್ ವಿಧಿವಶ

ಕೋಟ, ಏ.2: ರಾಜ್ಯದ ಪ್ರಸಿದ್ಧ ಚರ್ಮರೋಗ ತಜ್ಞರಾದ ಡಾ. ಎಸ್.ಎನ್. ವಾದಿರಾಜ್ (85) ಅವರು ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು. ಅವರ ನಿಧನದಿಂದ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ನಿವಾಸಿಯಾಗಿದ್ದ ಡಾ. ವಾದಿರಾಜ್ ಅವರು ತಮ್ಮ ವೈದ್ಯಕೀಯ ಸೇವೆಯನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸಿ ನಂತರ ಗೋವಾ ಸೇರಿದಂತೆ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದರು. 1972ರಲ್ಲಿ ಕೋಟದಲ್ಲಿ ‘ಸುಶ್ರುತಾ ಕ್ಲಿನಿಕ್’ ಆರಂಭಿಸಿದ ಅವರು ಕಳೆದ 54 ವರ್ಷಗಳಿಂದ ಸಾವಿರಾರು ರೋಗಿಗಳಿಗೆ ಸೇವೆ ಸಲ್ಲಿಸಿ ಅಪಾರ ಜನಮಾನ್ಯತೆ ಗಳಿಸಿದ್ದರು.
ವಿಶೇಷವಾಗಿ ಚರ್ಮರೋಗ ಚಿಕಿತ್ಸೆಯಲ್ಲಿ ರಾಜ್ಯ ಹಾಗೂ ಅಂತರರಾಜ್ಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಅವರು, ಬಿಹಾರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದು ಅವರ ವೈಶಿಷ್ಟ್ಯವಾಗಿತ್ತು.
ಕೋವಿಡ್ ಕಾಲದಲ್ಲಿ ಅಮೇರಿಕದಲ್ಲಿ ವಾಸವಾಗಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ರೋಗಿಗಳಿಗೆ ಸಲಹೆ ಹಾಗೂ ಚಿಕಿತ್ಸೆ ನೀಡಿದ ಅವರು, ಮಾನವೀಯ ಮೌಲ್ಯಗಳ ಪ್ರತಿರೂಪವಾಗಿದ್ದರು.
ವೈದ್ಯಕೀಯ ಸೇವೆಯ ಜೊತೆಗೆ ಅವರು ಉತ್ತಮ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದು, ವೈದ್ಯಕೀಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದರು. ಸಾಹಿತ್ಯ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿದ್ದರು.
ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ಹಾಗೂ ಸೇವಾಸಂಗಮ ಶಿಶುಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ಹಲವು ಸಂಘ-ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದರು.
ಅವರ ಅಗಲಿಕೆಯಿಂದ ಕುಟುಂಬಕ್ಕೆ ಮಾತ್ರವಲ್ಲದೆ, ಸಮಾಜಕ್ಕೂ ಅಪಾರ ನಷ್ಟ ಉಂಟಾಗಿದೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತದೇಹವನ್ನು ಶುಕ್ರವಾರ ಪೂರ್ವಾಹ್ನ 9.30ಕ್ಕೆ ಅವರ ಸ್ವಗೃಹ ಕದ್ರಿಕಟ್ಟಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.