

ಡೈಲಿವಾರ್ತೆ:03/ಏಪ್ರಿಲ್ /2026


ಗದಗದಲ್ಲಿ ಮುಸುಕುಧಾರಿ ಕಳ್ಳರ ಅಟ್ಟಹಾಸ: ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ

ಗದಗ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮುಸುಕುಧಾರಿ ಕಳ್ಳರ ಗ್ಯಾಂಗ್ ಮತ್ತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಭೀತಿ ಮೂಡಿಸಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಮಾರಕಾಸ್ತ್ರಗಳೊಂದಿಗೆ ಸಂಚರಿಸುತ್ತಿರುವ ಈ ತಂಡ, ಸರಣಿ ಕಳ್ಳತನದ ಮೂಲಕ ಪೊಲೀಸರಿಗೆ ಸವಾಲು ಹಾಕಿದೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಸಂಚಲನ:
ನಗರದ ಪುಟ್ಟರಾಜ್ ನಗರ ಮತ್ತು ಕೇಶವ್ ಪಾರ್ಕ್ ಪ್ರದೇಶಗಳಲ್ಲಿ ನಡುರಾತ್ರಿ ಸುಮಾರು ಐವರು ಮುಸುಕುಧಾರಿಗಳು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಈ ತಂಡ, ಮನೆಗಳ ಮುಂಭಾಗ ಹೊಂಚು ಹಾಕುತ್ತಿರುವುದು ನಿವಾಸಿಗಳ ನಿದ್ದೆಗೆಡಿಸಿದೆ.
ಬೀಗ ಹಾಕಿದ ಮನೆಯೇ ಕಳ್ಳರ ಟಾರ್ಗೆಟ್:
ಬಡಾವಣೆಯ ನಿವಾಸಿ ವಿಜಯಲಕ್ಷ್ಮೀ ಎಂಬುವವರು ಜನ್ಮದಿನದ ಕಾರ್ಯಕ್ರಮದ ನಿಮಿತ್ತ ತಂದೆಯ ಮನೆಗೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಕಳ್ಳರು, ಮನೆಯ ಬೀಗ ಮುರಿದು ಒಳನುಗ್ಗಿದ್ದಾರೆ. ಮನೆಯಲ್ಲಿದ್ದ ಸುಮಾರು 70 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಕಿಟಕಿ ಹಾಗೂ ಬಾಗಿಲುಗಳನ್ನು ಮುರಿದು ನುಗ್ಗುವ ಕಳ್ಳರ ಈ ಕಾರ್ಯಾಚರಣೆ ಕಂಡು ಜನ ಹೌಹಾರಿದ್ದಾರೆ.
ಬಡಾವಣೆಗಳಲ್ಲಿ ಹೆಚ್ಚಿದ ಭೀತಿ
ಕಳ್ಳರ ಉಪಟಳ ಎಷ್ಟರ ಮಟ್ಟಿಗೆ ಹೆಚ್ಚಾಗಿದೆಯೆಂದರೆ, ರಾತ್ರಿ 8 ಗಂಟೆಯಾಗುತ್ತಿದ್ದಂತೆ ಜನರು ಮನೆಯಿಂದ ಹೊರಬರಲು ಹೆದರುವಂತಾಗಿದೆ.
”ಮನೆಯ ಹೊರಗೆ ಮಾರಕಾಸ್ತ್ರಗಳೊಂದಿಗೆ ತಿರುಗಾಡುವ ಕಳ್ಳರನ್ನು ನೋಡಿದರೆ ಜೀವ ಭಯವಾಗುತ್ತಿದೆ. ಕೂಡಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಗಸ್ತು ಹೆಚ್ಚಿಸಬೇಕು,” ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.