ಡೈಲಿವಾರ್ತೆ:03/ಏಪ್ರಿಲ್ /2026

ಕೋಟ: ಗುಳ್ಳಾಡಿಯಲ್ಲಿ ಜೇಡಿಮಣ್ಣು ಅಕ್ರಮ ಸಾಗಾಟ: ಎರಡು ಟಿಪ್ಪರ್, ಹಿಟಾಚಿ ಸಹಿತ ವಶ – ಇಬ್ಬರು ಚಾಲಕರ ವಿರುದ್ಧ ಪ್ರಕರಣ ದಾಖಲು

ಕೋಟ: ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಗುಳ್ಳಾಡಿ ಪ್ರದೇಶದಲ್ಲಿ ಜೇಡಿಮಣ್ಣಿನ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಟದ ವಿರುದ್ಧ ಕೋಟ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸರ್ಕಾರಕ್ಕೆ ರಾಜಧನ ಪಾವತಿಸದೆ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಜೇಡಿಮಣ್ಣು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಘಟನೆ ಏಪ್ರಿಲ್ 2ರಂದು ಬೆಳಕಿಗೆ ಬಂದಿದೆ.

ರಾಜೀವ್ ಎಂಬುವವರ ಜಾಗದಲ್ಲಿ ಪರವಾನಿಗೆ ಇಲ್ಲದೆ ಜೇಡಿಮಣ್ಣನ್ನು ತೆಗೆಯಲಾಗುತ್ತಿದ್ದು, ಅದನ್ನು ಎರಡು ಟಿಪ್ಪರ್ ವಾಹನಗಳ ಮೂಲಕ ಸಾಗಿಸಲಾಗುತ್ತಿತ್ತು. ಈ ಸಂಬಂಧ ಆರೋಪಿತರಾದ KA-19-D-4448 ನೇ ಟಿಪ್ಪರ್ ವಾಹನದ ಚಾಲಕ ರಮೇಶ್ ಹಾಗೂ KA-20-B-3663 ನೇ ಟಿಪ್ಪರ್ ವಾಹನದ ಚಾಲಕ ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಾಗಿದೆ.

ಪೊಲೀಸರು ದಾಳಿ ನಡೆಸಿ ಸುಮಾರು 3 ಟನ್ ಜೇಡಿಮಣ್ಣಿನೊಂದಿಗೆ ಎರಡು ಟಿಪ್ಪರ್ ವಾಹನಗಳನ್ನು ಹಾಗೂ ಹಿಟಾಚಿ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2026ರಂತೆ ಕಲಂ 303(2), R/w 3(5) BNS ಹಾಗೂ 4, 4(1A), 21 MMRD ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.