

ಡೈಲಿವಾರ್ತೆ:02/ಏಪ್ರಿಲ್ /2026


ಮಳೆಯ ನಡುವೆಯೂ ಭಕ್ತಿಭಾವದ ಉತ್ಸವ: ಮಣೂರು ಮಹಾಲಿಂಗೇಶ್ವರ ದೇಗುಲದ ವೈಭವದ ರಥೋತ್ಸವ ಸಂಪನ್ನ

ಕೋಟ: ಇಲ್ಲಿನ ಮಣೂರು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಮಣೂರು ಶ್ರೀ ಮಹಾಲಿಂಗೇಶ್ವರ ಪಂಚಮುಖಿ ಹೇರಂಭ ಮಹಾಗಣಪತಿ ದೇಗುಲದ ವಾರ್ಷಿಕ ರಥೋತ್ಸವ ಕಾರ್ಯಕ್ರಮವು ಗುರುವಾರ ಭಕ್ತಿಭಾವದ ವಾತಾವರಣದಲ್ಲಿ ವೈಭವದಿಂದ ನೆರವೇರಿತು.

ರಥೋತ್ಸವವು ಕೋಟ ರಾಷ್ಟ್ರೀಯ ಹೆದ್ದಾರಿಯ ಮೂಲಕ ಅಮೃತೇಶ್ವರಿ ದೇಗುಲದ ಸಮೀಪ ಆಗಮಿಸಿದ ಸಂದರ್ಭದಲ್ಲಿ ಭಕ್ತರು ಮಹಾಲಿಂಗೇಶ್ವರನ ರಥವನ್ನು ಎಳೆದು ಭಕ್ತಿಪೂರ್ವಕವಾಗಿ ಸಂಭ್ರಮಿಸಿದರು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಸುಮಾರು ಒಂದು ವರೆ ಕಿಲೋಮೀಟರ್ ದೂರ ಸಂಚರಿಸಿದ ರಥೋತ್ಸವದಲ್ಲಿ ಕೀಲು ಕುದುರೆ, ವಿವಿಧ ರೀತಿಯ ಗೊಂಬೆಗಳು, ಸ್ತಬ್ಧ ಚಿತ್ರಗಳು, ಕೇರಳ ಚೆಂಡೆ ಹಾಗೂ ವಾದ್ಯಘೋಷಗಳು ಸೇರಿದಂತೆ ನಾನಾ ಸಾಂಸ್ಕೃತಿಕ ವೈಶಿಷ್ಟ್ಯಗಳು ಗಮನಸೆಳೆಯುವಂತಾಗಿದ್ದವು.
ಈ ಸಂದರ್ಭದಲ್ಲಿ ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಟ್ರಸ್ಟಿಗಳಾದ ರವಿ ಐತಾಳ್, ಅಶೋಕ್ ಶೆಟ್ಟಿ, ದಿವ್ಯ ಪ್ರಭು, ಅಚ್ಯುತ್ ಹಂದೆ, ಸುಫಲ ಶೆಟ್ಟಿ, ದಿನೇಶ್ ಆಚಾರ್, ಚಂದ್ರ ಹರ್ತಟ್ಟು ಹಾಗೂ ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಅರುಣಾಚಲ ಮಯ್ಯ, ವಿಷ್ಣುಮೂರ್ತಿ ಮಯ್ಯ, ಮಹೇಶ್ ಹೊಳ್ಳ, ಗೋಪಾಲ ಪೈ, ರಾಜೇಂದ್ರ ಉರಾಳ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಅಪರಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಮಳೆಯ ನಡುವೆಯೂ ಭಕ್ತರು ತೇರನ್ನು ಎಳೆದು ತಮ್ಮ ಶ್ರದ್ಧಾಭಕ್ತಿಯನ್ನು ವ್ಯಕ್ತಪಡಿಸಿದುದು ಉತ್ಸವಕ್ಕೆ ವಿಶೇಷ ಮೆರುಗು ನೀಡಿತು.