ಡೈಲಿವಾರ್ತೆ:03/ಏಪ್ರಿಲ್ /2026

ಕೋಟ: ಐಪಿಎಲ್ ಪಂದ್ಯ ಹೆಸರಿನಲ್ಲಿ ಅಕ್ರಮ ಬೆಟ್ಟಿಂಗ್ ದಂಧೆ – ಮಣೂರು ಬಾಳೆಬೆಟ್ಟಿನಲ್ಲಿ ಪೊಲೀಸ್ ದಾಳಿ, ಓರ್ವ ಆರೋಪಿಯ ಬಂಧನ!

ಕೋಟ: ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ನೆಪ ಮಾಡಿಕೊಂಡು ಅಕ್ರಮ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಪ್ರಕರಣವನ್ನು ಕೋಟ ಪೊಲೀಸರು ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಬ್ರಹ್ಮಾವರ ತಾಲೂಕಿನ ಕೋಟ ಮಣೂರು ಗ್ರಾಮದ ಬಾಳೆಬೆಟ್ಟು ಬಸ್ ನಿಲ್ದಾಣದ ಬಳಿ ನಡೆದಿದೆ.

ಏಪ್ರಿಲ್ 2ರಂದು ಸಂಜೆ 5.45ರ ಸುಮಾರಿಗೆ ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ಮಹಾಂತೇಶ್ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೋರ್ವ ಮೊಬೈಲ್ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಾ KKR ಮತ್ತು SRH ತಂಡಗಳ ನಡುವಿನ ಐಪಿಎಲ್ ಟಿ20 ಪಂದ್ಯಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಸುತ್ತಿರುವುದು ಪತ್ತೆಯಾಯಿತು.

ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನು ಆದಿತ್ಯ ಶೆಟ್ಟಿ (28) ಎಂದು ತಿಳಿದುಬಂದಿದ್ದು,
ನೂಜಿಯ ಸಂದೀಪ ಗಾಣಿಗನ ಸೂಚನೆಯಂತೆ “PARKER” ಎಂಬ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್ ಮೂಲಕ ಅಕ್ರಮ ದಂಧೆಯಲ್ಲಿ ತೊಡಗಿದ್ದುದಾಗಿ ಬಹಿರಂಗಪಡಿಸಿದ್ದಾನೆ.

ಹೆಚ್ಚುವರಿ ವಿಚಾರಣೆಯಲ್ಲಿ, ಇತ್ತೀಚೆಗೆ ನಡೆದ LSG ಮತ್ತು ಡೆಲ್ಲಿ ತಂಡಗಳ ನಡುವಿನ ಪಂದ್ಯದಲ್ಲೂ ಇದೇ ರೀತಿಯ ಬೆಟ್ಟಿಂಗ್ ಹಣವನ್ನು ಸಂಗ್ರಹಿಸಿ, ಅದನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿರುವ ಮಾಹಿತಿ ಹೊರಬಂದಿದೆ.
ಪೊಲೀಸರು ಆರೋಪಿಯಿಂದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ಸಂಬಂಧ ಇನ್ನೊಬ್ಬ ಆರೋಪಿ ಸಂದೀಪ ಗಾಣಿಗನಿಗಾಗಿ ಶೋಧ ಮುಂದುವರೆಸಲಾಗಿದೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/2026ರಂತೆ ಕಲಂ 78 KP Act, 112 BNS ಹಾಗೂ 66(D) IT Act ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.