

ಡೈಲಿವಾರ್ತೆ:03/ಏಪ್ರಿಲ್ /2026


ಕಂಟೇನರ್ ಲಾರಿಯಲ್ಲಿ ಗೋವುಗಳ ಅಕ್ರಮ ಸಾಗಾಟ: ಕಡಬ ಪೊಲೀಸರ ದಾಳಿ, 18ಕ್ಕೂ ಹೆಚ್ಚು ಜಾನುವಾರು ರಕ್ಷಣೆ, ಓರ್ವನ ಬಂಧನ

ಪುತ್ತೂರು, ಏಪ್ರಿಲ್ 3: ಹಾಸನ ಭಾಗದಿಂದ ಕೇರಳದತ್ತ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಜಾಲವನ್ನು ಕಡಬ ಪೊಲೀಸರು ಭೇದಿಸಿ, 18ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲದ ಕನ್ವಾರೆ ಪ್ರದೇಶದಲ್ಲಿ ಕಂಟೇನರ್ ಲಾರಿಯೊಂದನ್ನು ಪೊಲೀಸರು ಅಡ್ಡಹಾಕಿ ಪರಿಶೀಲನೆ ನಡೆಸಿದರು. ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ದಾಳಿ ನಡೆಸಲಾಗಿತ್ತು.
ಸಬ್ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಲಾರಿಯೊಳಗೆ ಹಿಂಸಾತ್ಮಕವಾಗಿ ಗೋವುಗಳನ್ನು ಕಟ್ಟಿ ಸಾಗಿಸುತ್ತಿರುವುದು ಪತ್ತೆಯಾಯಿತು. ತಕ್ಷಣವೇ ಜಾನುವಾರುಗಳನ್ನು ವಶಕ್ಕೆ ಪಡೆದು ರಕ್ಷಣೆ ನೀಡಲಾಗಿದೆ.
ಈ ಸಂಬಂಧ ಹೊಸೂರು ಮೂಲದ ಅಕ್ರಮ್ ಪಾಷ ಎಂಬಾತನನ್ನು ಬಂಧಿಸಲಾಗಿದ್ದು, ಲಾರಿಯಲ್ಲಿದ್ದ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ಕಡಬ ಪೊಲೀಸರು ಅಕ್ರಮ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.