

ಡೈಲಿವಾರ್ತೆ:04/ಏಪ್ರಿಲ್ /2026


ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ: ಸಂತ್ರಸ್ತೆಯ ಆರೋಪಕ್ಕೆ ಆರೋಪಿ ಸಮೀರ್ ಮುಲ್ಲಾ ಕೌಂಟರ್ – ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಹುಬ್ಬಳ್ಳಿ: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹುಬ್ಬಳ್ಳಿಯ ಲವ್ ಜಿಹಾದ್ ಪ್ರಕರಣ ಈಗ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ.
ಜಿಮ್ ತರಬೇತುದಾರನ ಮೇಲಿನ ಹಲ್ಲೆ ಹಾಗೂ ಲವ್ ಜಿಹಾದ್ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ, ಇದೀಗ ಪ್ರಮುಖ ಆರೋಪಿ ಸಮೀರ್ ಮುಲ್ಲಾ ಮೊದಲ ಬಾರಿಗೆ ಮೌನ ಮುರಿದು ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾನೆ.

ವೈರಲ್ ವಿಡಿಯೋ ಬಗ್ಗೆ ಸಮೀರ್ ಸ್ಪಷ್ಟನೆ:
ತನ್ನ ಮೇಲಿನ ಎಲ್ಲ ಆರೋಪಗಳನ್ನು ಬಲವಾಗಿ ನಿರಾಕರಿಸಿರುವ ಸಮೀರ್ ಮುಲ್ಲಾ, ವೈರಲ್ ಆಗಿರುವ ಖಾಸಗಿ ವಿಡಿಯೋ ಬಗ್ಗೆ ಮಹತ್ವದ ಸ್ಪಷ್ಟನೆ ನೀಡಿದ್ದಾನೆ. ವಿಡಿಯೋ ರೆಕಾರ್ಡ್ ಆಗಿರುವುದು ನಿಜ, ಆದರೆ ಅದನ್ನು ಚಿತ್ರೀಕರಿಸಿದ್ದು ನಾನಲ್ಲ. ಆ ವಿಡಿಯೋ ಇರುವುದು ಹುಡುಗಿಯ ಮೊಬೈಲ್‌ನಲ್ಲಿ. ಯಾರು ವಿಡಿಯೋ ಮಾಡಿದ್ದಾರೆ ಎಂಬ ಸತ್ಯ ತಿಳಿಯಬೇಕೆಂದರೆ ನನ್ನ ಮತ್ತು ಅವಳ ಮೊಬೈಲ್ ಫೋನ್‌ಗಳನ್ನು ತನಿಖೆ ಮಾಡಲಿ ಎಂದು ಸವಾಲು ಹಾಕಿದ್ದಾನೆ.
”ಪ್ರಜ್ಞೆ ತಪ್ಪಿದ್ದು ನಾನೇ ಹೊರತು ಆಕೆಯಲ್ಲ”:
ಯುವತಿ ಮಾಡಿದ್ದ ‘ಮೌನ ಪಾನೀಯ’ ನೀಡಿ ಪ್ರಜ್ಞೆ ತಪ್ಪಿಸಿದ ಆರೋಪಕ್ಕೆ ತಿರುಗೇಟು ನೀಡಿರುವ ಸಮೀರ್ ತಂಪು ಪಾನೀಯದಲ್ಲಿ ಔಷಧ ನೀಡಿದ್ದರೆ ಆಕೆ ಪ್ರಜ್ಞೆ ಕಳೆದುಕೊಳ್ಳಬೇಕಿತ್ತು. ಆದರೆ ವಿಡಿಯೋದಲ್ಲಿ ಆಕೆ ಸಕ್ರಿಯವಾಗಿರುವುದು ಕಾಣಿಸುತ್ತದೆ. ನಿಜವಾಗಿ ಪ್ರಜ್ಞೆ ತಪ್ಪಿ ಮಲಗಿದ್ದು ನಾನೇ ಹೊರತು ಆಕೆಯಲ್ಲ. ವಿಡಿಯೋವನ್ನು ಆಕೆಯೇ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾನೆ.
ಒತ್ತಡದ ಕಾರಣಕ್ಕೆ ಆರೋಪ:
ಆಕೆ ತನ್ನ ಪೋಷಕರು ಮತ್ತು ಸಮಾಜದ ಒತ್ತಡಕ್ಕೆ ಮಣಿದು ನನ್ನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾಳೆ. ಮೊದಲು ವಿಡಿಯೋ ಯಾರ ಮೊಬೈಲ್‌ನಲ್ಲಿದೆ ಮತ್ತು ಯಾರು ಆಕ್ಟಿವ್ ಆಗಿದ್ದಾರೆ ಎಂಬುದನ್ನು ಪೊಲೀಸರು ಸರಿಯಾಗಿ ಪರಿಶೀಲಿಸಲಿ ಎಂದು ಸಮೀರ್ ಮುಲ್ಲಾ ಮನವಿ ಮಾಡಿದ್ದಾನೆ.
ಸಂತ್ರಸ್ತೆಯ ಹೇಳಿಕೆಯ ಬೆನ್ನಲ್ಲೇ ಈಗ ಆರೋಪಿಯ ಈ ಪ್ರತಿ-ಆರೋಪ ಪ್ರಕರಣವನ್ನು ಇನ್ನಷ್ಟು ಜಟಿಲಗೊಳಿಸಿದ್ದು, ಪೊಲೀಸರ ಮುಂದಿನ ತನಿಖೆ ಕುತೂಹಲ ಮೂಡಿಸಿದೆ.