

ಡೈಲಿವಾರ್ತೆ:04/ಏಪ್ರಿಲ್ /2026


ಸಕಲೇಶಪುರ: ಚಲಿಸುತ್ತಿದ್ದ ಬೈಕಿನಲ್ಲಿ ಆಕಸ್ಮಿಕ ಅಗ್ನಿ ಅವಘಡ – ಸುಟ್ಟು ಭಸ್ಮವಾದ ಯಮಹಾ R15

ಸಕಲೇಶಪುರ: ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದ್ದು, ಯುವಕನೊಬ್ಬನ ಯಮಹಾ R15 ಬೈಕ್ ಕಣ್ಣೆದುರೇ ಸುಟ್ಟು ಕರಕಲಾದ ಘಟನೆ ಜರುಗಿದೆ.
ಸ್ಥಳೀಯ ನಿವಾಸಿ ಚೋಟು ಎಂಬುವರಿಗೆ ಸೇರಿದ ಬೈಕ್ ಇದಾಗಿದ್ದು, ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಅವರು ಮನೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಲಿಸುತ್ತಿದ್ದ ಬೈಕಿನ ಇಂಜಿನ್ ಭಾಗದಲ್ಲಿ ಮೊದಲು ಅಲ್ಪ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಚಾಲಕ ಕೂಡಲೇ ಬೈಕ್ ನಿಲ್ಲಿಸಿ ಕೆಳಗಿಳಿದಿದ್ದಾರೆ.
ಬೈಕ್ ನಿಲ್ಲಿಸಿದ ಕ್ಷಣಾರ್ಧದಲ್ಲೇ ಬೆಂಕಿ ಇಡೀ ವಾಹನವನ್ನು ಆವರಿಸಿಕೊಂಡಿದೆ. ಸ್ಥಳೀಯರು ತಕ್ಷಣವೇ ಧಾವಿಸಿ ನೀರು ಹಾಕಿ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಬೈಕ್ ಸಂಪೂರ್ಣವಾಗಿ ಭಸ್ಮವಾಗಿದೆ.
ಬೈಕ್ ಸವಾರ ಚೋಟು ಅವರು ಸಮಯಪ್ರಜ್ಞೆ ಮೆರೆದು ತಕ್ಷಣ ವಾಹನದಿಂದ ಕೆಳಗಿಳಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೈಕಿನ ಎಲೆಕ್ಟ್ರಿಕ್ ವೈರಿಂಗ್‌ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಈಗ ಕಬ್ಬಿಣದ ಹಂದರವಾಗಿ ಮಾರ್ಪಟ್ಟಿದೆ.