

ಡೈಲಿವಾರ್ತೆ:03/ಏಪ್ರಿಲ್ /2026


ಕಾರ್ಯಕ್ರಮ ಮಧ್ಯೆ ಕುಸಿದು ಬಿದ್ದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ: ಆಸ್ಪತ್ರೆಗೆ ದಾಖಲು

ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಗರದಲ್ಲಿ ನಡೆದಿದೆ.
ಕೊಂಡಜ್ಜಿ ಬಸಪ್ಪ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಹೆಗ್ಡೆ ಅವರಿಗೆ ಏಕಾಏಕಿ ವಾಂತಿ ಕಾಣಿಸಿಕೊಂಡಿದ್ದು, ಮನೆಗೆ ತೆರಳಲು ವೇದಿಕೆಯಿಂದ ಹೊರಡುವಾಗ ಅವರು ಕುಸಿದು ಬಿದ್ದರು. ಈ ಸಂದರ್ಭದಲ್ಲಿ ತಕ್ಷಣ ಅಂಬುಲೆನ್ಸ್ ಲಭ್ಯವಿರದ ಹಿನ್ನೆಲೆ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಮ್ಮದೇ ವಾಹನದಲ್ಲಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರು.
ವೈದ್ಯರ ಪ್ರಕಾರ, ಶುಗರ್ ಲೆವೆಲ್ ಕಡಿಮೆಯಾದ ಕಾರಣದಿಂದ ಅವರು ಅಸ್ವಸ್ಥಗೊಂಡಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್, “ಸಂತೋಷ್ ಹೆಗ್ಡೆ ಅವರಿಗೆ ತಕ್ಷಣ ಚಿಕಿತ್ಸೆ ಒದಗಿಸಲಾಗಿದ್ದು, ಯಾವುದೇ ಆತಂಕದ ಅಗತ್ಯವಿಲ್ಲ. ಅವರು ಆಸ್ಪತ್ರೆಯಲ್ಲಿ ಆರಾಮವಾಗಿದ್ದಾರೆ” ಎಂದು ಹೇಳಿದ್ದಾರೆ.
ಇದಲ್ಲದೆ, ಸಂತೋಷ್ ಹೆಗ್ಡೆ ಅವರ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದ್ದು, ವೈದ್ಯರು ಮುಂದಿನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.