


ಡೈಲಿವಾರ್ತೆ:04/ಏಪ್ರಿಲ್ /2026

ಇರಾನ್‌ಗೆ ಟ್ರಂಪ್ 48 ಗಂಟೆಗಳ ಅಂತಿಮ ಗಡುವು: ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಭೀಕರ ಪರಿಣಾಮದ ಎಚ್ಚರಿಕೆ!

ವಾಷಿಂಗ್ಟನ್: ಮಧ್ಯಪ್ರಾಚ್ಯದ ಸಂಘರ್ಷದ ಕಿಚ್ಚು ಜಾಗತಿಕ ಮಟ್ಟದಲ್ಲಿ ವ್ಯಾಪಿಸುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಗುಡುಗಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ಕೂಡಲೇ ಮುಕ್ತಗೊಳಿಸಿ, ಇಲ್ಲದಿದ್ದರೆ ಭಾರಿ ಅಪಾಯ ಎದುರಿಸಬೇಕಾಗುತ್ತದೆ ಎಂದು ಅವರು 48 ಗಂಟೆಗಳ ಕಟ್ಟುನಿಟ್ಟಿನ ಡೆಡ್‌ಲೈನ್ ನೀಡಿದ್ದಾರೆ.
ಟ್ರೂತ್ ಸೋಶಿಯಲ್‌ನಲ್ಲಿ ಎಚ್ಚರಿಕೆ:
ತಮ್ಮ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್ ಒಪ್ಪಂದಕ್ಕೆ ಬರಲು ಮತ್ತು ಹಾರ್ಮುಜ್ ಜಲಸಂಧಿಯನ್ನು ತೆರೆಯಲು ನಾನು ನಿಮಗೆ ನೀಡಿದ್ದ 10 ದಿನಗಳ ಕಾಲಾವಕಾಶವನ್ನು ನೆನಪಿಟ್ಟುಕೊಳ್ಳಿ. ಈಗ ಕೇವಲ 48 ಗಂಟೆಗಳು ಮಾತ್ರ ಬಾಕಿ ಇವೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ. ಮಾರ್ಚ್ 26 ರಂದೇ ಇರಾನ್‌ಗೆ ಗಡುವು ನೀಡಲಾಗಿದ್ದರೂ, ಇರಾನ್ ಕೋರಿಕೆಯ ಮೇರೆಗೆ ಅದನ್ನು ಮುಂದೂಡಲಾಗಿತ್ತು. ಆದರೆ ಇರಾನ್ ಅಮೆರಿಕದ ಪ್ರಸ್ತಾಪವನ್ನು ‘ಏಕಪಕ್ಷೀಯ ನಿರ್ಧಾರ’ ಎಂದು ತಳ್ಳಿಹಾಕಿರುವುದು ಟ್ರಂಪ್ ಆಕ್ರೋಶಕ್ಕೆ ಕಾರಣವಾಗಿದೆ.
ಚಕ್ರವ್ಯೂಹದಲ್ಲಿ ಅಮೆರಿಕ?
ಮಧ್ಯಪ್ರಾಚ್ಯ ಯುದ್ಧ ಆರಂಭವಾಗಿ ಒಂದು ತಿಂಗಳು ಕಳೆದರೂ ಶಾಂತಿಯ ಲಕ್ಷಣಗಳು ಕಾಣಿಸುತ್ತಿಲ್ಲ. ಇರಾನ್ ವಿರುದ್ಧ ಇಸ್ರೇಲ್ ಜೊತೆಗೂಡಿ ಅಮೆರಿಕ ಹಮ್ಮಿಕೊಂಡಿದ್ದ ‘ಆಪರೇಷನ್ ಎಪಿಕ್ ಪ್ಯೂರಿ’ ನಿರೀಕ್ಷಿತ ಯಶಸ್ಸು ಕಾಣುವ ಬದಲು ಅಮೆರಿಕಕ್ಕೆ ಭಾರಿ ಹಿನ್ನಡೆ ತಂದಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಒಂದು ವಾರದಲ್ಲಿ ಯುದ್ಧ ಮುಗಿಯಲಿದೆ ಎಂಬ ಟ್ರಂಪ್ ಲೆಕ್ಕಾಚಾರವನ್ನು ಇರಾನ್‌ನ ಕ್ಷಿಪಣಿ ದಾಳಿಗಳು ತಲೆಕೆಳಗಾಗಿಸಿವೆ.
ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವುದು ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ನೀಡಿದೆ. ಈಗ ಟ್ರಂಪ್ ನೀಡಿರುವ 48 ಗಂಟೆಗಳ ಗಡುವು ಯುದ್ಧವನ್ನು ಮತ್ತಷ್ಟು ಭೀಕರ ಹಂತಕ್ಕೆ ಕೊಂಡೊಯ್ಯಲಿದೆಯೇ ಅಥವಾ ಇರಾನ್ ಮಣಿಯಲಿದೆಯೇ ಎಂಬುದು ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ.