


ಡೈಲಿವಾರ್ತೆ:06/ಏಪ್ರಿಲ್ /2026

ವಿಧಿಯಾಟಕ್ಕೆ ಅನಾಥರಾದ ಮೂವರು ಮಕ್ಕಳು: ಪತ್ನಿ ಆತ್ಮಹತ್ಯೆ ಬೆನ್ನಲ್ಲೇ ಅಪಘಾತಕ್ಕೆ ಬಲಿಯಾದ ಪತಿ!

ಬೆಳಗಾವಿ: ವಿಧಿಯ ಕ್ರೂರ ಆಟಕ್ಕೆ ಒಂದೇ ದಿನ ದಂಪತಿಗಳು ಸಾವನ್ನಪ್ಪಿದ್ದು, ಮೂವರು ಪುಟ್ಟ ಮಕ್ಕಳು ಅನಾಥರಾದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಅನಾರೋಗ್ಯದಿಂದ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡರೆ, ಆಕೆಯನ್ನು ನೋಡಲು ಆಸ್ಪತ್ರೆಗೆ ಧಾವಿಸುತ್ತಿದ್ದ ಪತಿ ರಸ್ತೆ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ.
ಘಟನೆಯ ವಿವರ:
ಅರವಳ್ಳಿ ಗ್ರಾಮದ ಮಧುರಾ ಕರೆಪ್ಪ ಮಾದರ (30) ಹಾಗೂ ಕರೆಪ್ಪ ಗಂಗಪ್ಪ ಮಾದರ (36) ಮೃತಪಟ್ಟ ದುರ್ದೈವಿ ದಂಪತಿಗಳು. ಮಧುರಾ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದರಿಂದ ಜಿಗುಪ್ಸೆಗೊಂಡು ವಿಷ ಸೇವಿಸಿದ್ದರು. ಕೂಡಲೇ ಅವರನ್ನು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಧುರಾ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ಹೋಗುವಾಗ ಅಪ್ಪಳಿಸಿದ ಸಾವು:
ಇತ್ತ ಪತ್ನಿ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದ ಪತಿ ಕರೆಪ್ಪ, ಆಕೆಯನ್ನು ನೋಡಲು ಬೆಳಗಾವಿಗೆ ತರಾತುರಿಯಲ್ಲಿ ಹೊರಟಿದ್ದರು. ಅರವಳ್ಳಿ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದಾಗ ಧಾರವಾಡದಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಕರೆಪ್ಪ ಅವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಕರೆಪ್ಪ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕಣ್ಣೀರಲ್ಲಿ ಮುಳುಗಿದ ಗ್ರಾಮ:
ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ದಂಪತಿಗಳ ಸಾವಿನಿಂದ ಅರವಳ್ಳಿ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಗ್ರಾಮಸ್ಥರು ಕಂಬನಿ ಮಿಡಿಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.