ಡೈಲಿವಾರ್ತೆ:06/ಏಪ್ರಿಲ್ /2026

ಇನ್ ಸ್ಟಾಗ್ರಾಮ್ ನಲ್ಲಿ ಕಣ್ಣೀರಿಟ್ಟ ನಟಿ ಕೃಷಿ ತಾಪಂಡ: ಉದ್ಯಮಿ ವಿರುದ್ಧದ ಕಾನೂನು ಸಮರಕ್ಕೆ ಸಿಕ್ಕಿತೇ ಹೊಸ ತಿರುವು?

​ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಹಾಗೂ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ನಡುವಿನ ಕಾನೂನು ಸಮರ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಉದ್ಯಮಿಗೆ ಬೆದರಿಕೆ ಹಾಕಿದ ಆರೋಪದಡಿ ನಟಿಯ ಆಪ್ತ ಗೆಳೆಯ ಅರೆಸ್ಟ್ ಆಗ ಬೆನ್ನಲ್ಲೇ, ನಟಿ ಕಣ್ಣೀರಿಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಕರಣ ಈಗ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್ ಸಂಚಿನ ರೂಪ ಪಡೆದಿದೆ.

​ನಟಿಯ ಗೆಳೆಯನಿಂದ ‘ಇಂಟರ್‌ನ್ಯಾಷನಲ್ ಸಿಂಡಿಕೇಟ್’ ಡ್ರಾಮಾ!
​ಅರವಿಂದ್ ರೆಡ್ಡಿಗೆ ಬಂದಿದ್ದ ಬೆದರಿಕೆ ಪತ್ರದ ತನಿಖೆ ನಡೆಸಿದ ಹೆಚ್.ಎ.ಎಲ್ ಪೊಲೀಸರು ಶಾಕಿಂಗ್ ಸತ್ಯವನ್ನು ಹೊರಹಾಕಿದ್ದಾರೆ. ನಟಿಯ ಆಪ್ತ ಗೆಳೆಯ ವೈಶಾಕ್ ಎಂಬಾತನೇ ಈ ಪತ್ರದ ರೂವಾರಿ ಎಂಬುದು ಬಯಲಾಗಿದೆ. ಪತ್ರದಲ್ಲಿ ತನ್ನನ್ನು ತಾನು ಏಷ್ಯಾದ ಅತಿದೊಡ್ಡ ಶಸ್ತ್ರಾಸ್ತ್ರ ಸರಬರಾಜುದಾರ ಮತ್ತು ಅಂತರಾಷ್ಟ್ರೀಯ ಸಿಂಡಿಕೇಟ್ ಸದಸ್ಯ ಎಂದು ಬಿಂಬಿಸಿಕೊಂಡಿದ್ದ ವೈಶಾಕ್, ಉದ್ಯಮಿಗೆ ₹7 ಕೋಟಿ ನೀಡುವಂತೆ ಡಿಮ್ಯಾಂಡ್ ಮಾಡಿದ್ದ.
​ಒಂದು ವೇಳೆ ಹಣ ನೀಡದಿದ್ದರೆ ಉದ್ಯಮವನ್ನು ನಾಶ ಮಾಡುವುದಾಗಿ ಹಾಗೂ ಜಗಳ ನಿಲ್ಲಿಸಿ ಪ್ರಕರಣ ಸುಖಾಂತ್ಯಗೊಳಿಸುವಂತೆ ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು. ಪೊಲೀಸರ ದಾರಿ ತಪ್ಪಿಸಲು ಗ್ಯಾರೇಜ್ ಬಾಲಕನ ಮೂಲಕ ಕೊರಿಯರ್ ಮಾಡಿಸಿದ್ದರೂ, ತಾಂತ್ರಿಕ ತನಿಖೆಯ ಬಲೆಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ.

​ಲೈಂಗಿಕ ಕಿರುಕುಳ ವರ್ಸಸ್ ಹಣದ ಬೇಡಿಕೆ:
​ಈ ಪ್ರಕರಣದ ಮೂಲ ಇರುವುದು ನಟಿ ಕೃಷಿ ತಾಪಂಡ ಮತ್ತು ಅರವಿಂದ್ ರೆಡ್ಡಿ ನಡುವಿನ ಪ್ರೇಮ ವೈಫಲ್ಯದಲ್ಲಿ ಎನ್ನಲಾಗಿದೆ. ಅರವಿಂದ್ ರೆಡ್ಡಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ದೂರು ನೀಡಿದ್ದಾರೆ. ಇನ್ನೊಂದೆಡೆ ತನ್ನ ಹೆಸರನ್ನು ಹಾಳುಮಾಡಿ, ಬೆದರಿಕೆ ಹಾಕಿ ಹಣ ದೋಚಲು ನಟಿ ಮತ್ತು ಆಕೆಯ ಗೆಳೆಯ ಸ್ಕೆಚ್ ಹಾಕಿದ್ದಾರೆ ಎಂಬುದು ಅರವಿಂದ್ ರೆಡ್ಡಿ ಆರೋಪ.

​ಇನ್‌ಸ್ಟಾಗ್ರಾಮ್‌ನಲ್ಲಿ ಕಣ್ಣೀರಿಟ್ಟ ನಟಿ: ಪಶ್ಚಾತ್ತಾಪವೋ ಅಥವಾ ಒತ್ತಡವೋ?

ವೈಶಾಕ್ ಬಂಧನದ ಬೆನ್ನಲ್ಲೇ ಕೃಷಿ ತಾಪಂಡ ಅವರು ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿದೆ. ತನ್ನ ಗೆಳೆಯ ಸಿಕ್ಕಿಬಿದ್ದಿದ್ದಕ್ಕೆ ಈ ಕಣ್ಣೀರೇ? ಅಥವಾ ಪ್ರಕರಣ ತಲೆಕೆಳಗಾಗುತ್ತಿರುವ ಭಯವೇ? ಅಥವಾ ಇದು ಕೇವಲ ಮಾನಸಿಕ ಒತ್ತಡದ ಹೊರಹಾಕುವಿಕೆಯೇ? ಎಂಬ ಬಗ್ಗೆ ಪೊಲೀಸರು ಕೂಡ ಗಮನ ಹರಿಸುತ್ತಿದ್ದಾರೆ.