ಡೈಲಿವಾರ್ತೆ:07/ಏಪ್ರಿಲ್ /2026

ಗುಡಿಸಲಿನಿಂದ ಜ್ಞಾನ ಮಂದಿರಕ್ಕೆ: ಡಾ. ಸಿ.ಎಂ. ರಾಜಶೇಖರ್ ಅವರ ಸೇವಾ ಸಂಕ್ರಾಂತಿ

ಬೆಂಗಳೂರು, ಏ.07: ಬಡತನದ ಕತ್ತಲಲ್ಲಿ ಜ್ಞಾನದ ಬೆಳಕು ಹಚ್ಚಿದ ಸಮಾಜಸೇವಕರಾಗಿ ಡಾ. ಸಿ.ಎಂ. ರಾಜಶೇಖರ್ ಗುರುತಿಸಿಕೊಂಡಿದ್ದಾರೆ. ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಚಿಂತಲಮಡಿವಾಳ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು, ತಮ್ಮ ವೈಯಕ್ತಿಕ ಯಶಸ್ಸಿಗಿಂತ ಸಮಾಜದ ಏಳಿಗೆಯನ್ನೇ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದಾರೆ.

ಐಟಿ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಗುಡಿಸಲಿನ ಮಕ್ಕಳ ಶಿಕ್ಷಣದ ಕಷ್ಟಗಳು ಅವರ ಮನಸ್ಸನ್ನು ತಟ್ಟಿದವು. ಶಾಲೆಗೆ ಹೋಗುವ ಮಕ್ಕಳನ್ನು ಆಸೆಯಿಂದ ನೋಡುವ ಬಡ ಮಕ್ಕಳ ಕಣ್ಣುಗಳು ಅವರಿಗೆ ಪ್ರೇರಣೆಯಾಗಿ, ‘ಕೆ.ಆರ್. ಸೇವಾ ಚಾರಿಟಬಲ್ ಟ್ರಸ್ಟ್’ ಸ್ಥಾಪನೆಗೆ ಕಾರಣವಾಯಿತು.


ಟ್ರಸ್ಟ್ ಮೂಲಕ ಅವರು ಅನೇಕ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಗುಡಿಸಲು ಮಕ್ಕಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಶಾಲೆಗೆ ಸೇರಿಸುವುದು, 50ಕ್ಕೂ ಹೆಚ್ಚು ದೃಷ್ಟಿಹೀನ ವಿದ್ಯಾರ್ಥಿಗಳನ್ನು ದತ್ತು ಪಡೆದು ಸಂಪೂರ್ಣ ಶಿಕ್ಷಣದ ಜವಾಬ್ದಾರಿ ವಹಿಸುವುದು, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಕಂಪ್ಯೂಟರ್ ಲ್ಯಾಬ್ ಸ್ಥಾಪನೆ ಸೇರಿದಂತೆ ಹಲವು ಕಾರ್ಯಗಳು ಗಮನಾರ್ಹ.
ಇದಲ್ಲದೆ, 620ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಆಹಾರ ಮತ್ತು ತರಗತಿಗಳ ವ್ಯವಸ್ಥೆ ಮಾಡಿದ್ದು, ಪರಿಸರ ಸಂರಕ್ಷಣೆಗೆ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಮಾದರಿಯಾಗಿದ್ದಾರೆ.
12 ವರ್ಷಗಳಿಂದ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ರಾಜಶೇಖರ್ ಅವರಿಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳು ಸಂದಿವೆ.
ಬಡತನದ ಬಲೆಯಿಂದ ಮಕ್ಕಳನ್ನು ಶಿಕ್ಷಣದ ಬೆಳಕಿಗೆ ತರುವ ಅವರ ಕನಸು ಇಂದು ಸಾವಿರಾರು ಕುಟುಂಬಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಅವರ ಸೇವಾ ಪಥ ಯುವಪೀಳಿಗೆಗೆ ಸ್ಪೂರ್ತಿಯಾಗಿದೆ.