


ಡೈಲಿವಾರ್ತೆ:09/ಏಪ್ರಿಲ್ /2026

ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಉಪಚುನಾವಣೆ ಮತದಾನ ಆರಂಭ

ದಾವಣಗೆರೆ/ಬಾಗಲಕೋಟೆ, ಏ. 9: ಕರ್ನಾಟಕದ ವಿಧಾನಸಭೆ ಕ್ಷೇತ್ರಗಳಾದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ.
ಮತದಾನ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದ್ದು ಎರಡೂ ಕ್ಷೇತ್ರಗಳಿಂದ ಒಟ್ಟು 34 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸುಗಮ ಮತದಾನಕ್ಕಾಗಿ ಎರಡೂ ಕ್ಷೇತ್ರಗಳಲ್ಲಿ ಸುಮಾರು 2,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಉಪಚುನಾವಣೆಯ ಫಲಿತಾಂಶವು ಮೇ 4 ಸೋಮವಾರ ಪ್ರಕಟವಾಗಲಿದೆ. ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಗಳಿಗೆ ಇಂದು ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಮತ್ತು ಬಿಜೆಪಿಯಿಂದ ಶ್ರೀನಿವಾಸ್ ಟಿ. ದಾಸಕರಿಯಪ್ಪ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಉಮೇಶ್ ಮೇಟಿ ಮತ್ತು ಬಿಜೆಪಿಯ ವೀರಣ್ಣ ಚರಂತಿಮಠ ಸೇರಿದಂತೆ ಒಟ್ಟು 20 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಡೆಯುತ್ತಿದೆ.