ಡೈಲಿವಾರ್ತೆ:08/ಏಪ್ರಿಲ್ /2026

ದತ್ತಪೀಠದ ತಪ್ಪಲಿನಲ್ಲಿ 15ರ ಬಾಲಕಿ ನಿಗೂಢ ನಾಪತ್ತೆ – 24 ಗಂಟೆ ಕಳೆದರೂ ಸುಳಿವು ಸಿಕ್ಕಿಲ್ಲ, ಶೋಧ ಕಾರ್ಯ ತೀವ್ರ

ಚಿಕ್ಕಮಗಳೂರು: ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ ದತ್ತಪೀಠ ತಪ್ಪಲಿನ ಮಾಣಿಕ್ಯಾಧಾರ ಪ್ರದೇಶದಲ್ಲಿ 15 ವರ್ಷದ ಬಾಲಕಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ.

ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆ ಮೂಲದ ಶ್ರೀನಂದ (15) ನಾಪತ್ತೆಯಾದ ಬಾಲಕಿ ಎಂದು ಗುರುತಿಸಲಾಗಿದೆ. ಶಾಲಾ ರಜೆ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಪ್ರವಾಸಕ್ಕೆ ಬಂದಿದ್ದಳು. ಉತ್ತರ ಕರ್ನಾಟಕ ಸುತ್ತಿ, ಬಳಿಕ ಕಾಫಿನಾಡಿನ ಸೌಂದರ್ಯ ಸವಿಯಲು ಚಿಕ್ಕಮಗಳೂರಿಗೆ ಆಗಮಿಸಿದ್ದ ಕುಟುಂಬ, ದತ್ತಪೀಠದ ಮಾಣಿಕ್ಯಾಧಾರ ಜಲಪಾತಕ್ಕೆ ಭೇಟಿ ನೀಡಿತ್ತು.
ಈ ವೇಳೆ ಕುಟುಂಬದವರು ಮುಂದೆ ಸಾಗುತ್ತಿದ್ದಾಗ, ಹಿಂದಿನಿಂದ ಬರುತ್ತಿದ್ದ ಶ್ರೀನಂದ ಕ್ಷಣಾರ್ಧದಲ್ಲಿ ಕಾಣೆಯಾಗಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ಆರಂಭಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಘಟನೆ ತಿಳಿದ ಕೂಡಲೇ ಅರಣ್ಯ ಇಲಾಖೆ, ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಶೋಧ ಕಾರ್ಯ ಆರಂಭಿಸಿದರು. ಏಪ್ರಿಲ್ 7ರ ಮಧ್ಯರಾತ್ರಿ ವರೆಗೆ ಕಾರ್ಯಾಚರಣೆ ನಡೆದರೂ ಯಾವುದೇ ಪತ್ತೆ ಸಿಗಲಿಲ್ಲ. ಕಗ್ಗತ್ತಲು, ದಟ್ಟ ಕಾನನ ಹಾಗೂ ಕಡಿದಾದ ಬೆಟ್ಟಗುಡ್ಡಗಳ ಹಿನ್ನೆಲೆ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಏಪ್ರಿಲ್ 8ರ ಬೆಳಿಗ್ಗೆ ಪುನಃ ಶೋಧ ಕಾರ್ಯ ಆರಂಭವಾಗಿದ್ದು, ಈಗ State Disaster Response Force (SDRF) ತಂಡವೂ ಕಾರ್ಯಾಚರಣೆಗೆ ಸೇರಿಕೊಂಡಿದೆ. ಥರ್ಮಲ್ ಡ್ರೋನ್‌ಗಳ ಸಹಾಯದಿಂದ ಹುಡುಕಾಟ ನಡೆಸಲಾಗುತ್ತಿದೆ. ಮೂರು ಇಲಾಖೆಗಳ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಐದು ತಂಡಗಳಾಗಿ ವಿಭಜನೆಗೊಂಡು ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ.

ಬಾಲಕಿ ನಾಪತ್ತೆಯಾದ ಪ್ರದೇಶ ತೀವ್ರ ಕಡಿದಾದ ಹಾಗೂ ಅಪಾಯಕರವಾಗಿದ್ದು, ವಿವಿಧ ದಾರಿಗಳಲ್ಲಿ ತಂಡಗಳು ಶೋಧ ಮುಂದುವರೆಸಿವೆ. ಮಳೆ ಅಥವಾ ಜಾರಿಕೆಯಂತಹ ಯಾವುದೇ ಸಹಜ ಕಾರಣಗಳಿಲ್ಲದ ಹಿನ್ನೆಲೆ ಪ್ರಕರಣ ಮತ್ತಷ್ಟು ನಿಗೂಢತೆಗೆ ಕಾರಣವಾಗಿದೆ.
ಒಂದು ಗಂಟೆಯೊಳಗೆ ವ್ಯಾಪಕ ಹುಡುಕಾಟ ನಡೆದಿದ್ದರೂ ಸುಳಿವು ಸಿಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ನಡುವೆ, ಬಿಸಿಲು, ಕತ್ತಲೆ ಎನ್ನದೇ ಅಧಿಕಾರಿಗಳು ಬಾಲಕಿ ಪತ್ತೆಗೆ ಶ್ರಮಿಸುತ್ತಿದ್ದಾರೆ.