


ಡೈಲಿವಾರ್ತೆ:09/ಏಪ್ರಿಲ್ /2026

10 ದಿನ ಶವದ ಜೊತೆ ಬದುಕಿದ ಮಾನಸಿಕ ಅಸ್ವಸ್ಥೆ ಪತ್ನಿ: ಗಂಡ ಸತ್ತದ್ದು ತಿಳಿಯದ ಕಣ್ಣೀರಿನ ಕಥೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಗಂಡ ಸಾವನ್ನಪ್ಪಿ 10 ದಿನಗಳು ಕಳೆದರೂ, ಮಾನಸಿಕ ಅಸ್ವಸ್ಥ ಪತ್ನಿ ಪತಿಯ ಮೃತದೇಹದ ಜೊತೆಯೇ ವಾಸವಿದ್ದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಬಣಕಲ್ ಗ್ರಾಮದ ನಿವಾಸಿ ಸಿರಿಲ್ ಮೋನಿಸ್ (77) ಅವರು ಅನಾರೋಗ್ಯದಿಂದ ಸುಮಾರು ಹತ್ತು ದಿನಗಳ ಹಿಂದೆ ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. ಆದರೆ, ಅವರ ಪತ್ನಿ ಮಾನಸಿಕ ಅಸ್ವಸ್ಥೆಯಾಗಿದ್ದರಿಂದ ಪತಿಯ ಸಾವಿನ ಅರಿವೇ ಇಲ್ಲದೆ, ಕೊಳೆತು ಹುಳ ಬಿದ್ದ ಶವದ ಜೊತೆಯಲ್ಲೇ ದಿನಗಳನ್ನು ಕಳೆದಿದ್ದರು.
ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರ ಮುಂದೆ ಮಹಿಳೆ “ನನ್ನ ಗಂಡ ನನಗೆ ಬೇಕು, ಅವರನ್ನು ಕರೆದೊಯ್ಯಬೇಡಿ” ಎಂದು ರೋದಿಸಿದ ದೃಶ್ಯ ಕರುಳು ಹಿಂಡುವಂತಿತ್ತು.
ಮೃತರ ಮಗ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಮಗನು ಪ್ರತಿದಿನ ತಾಯಿಗೆ ಕರೆ ಮಾಡಿ ವಿಚಾರಿಸುತ್ತಿದ್ದರೂ, “ಅಪ್ಪ ಚೆನ್ನಾಗಿದ್ದಾರೆ” ಎಂಬ ಉತ್ತರವೇ ಬರುತ್ತಿತ್ತು. ಇದರಿಂದ ತಂದೆಯ ಸಾವಿನ ವಿಷಯ ಕುಟುಂಬಕ್ಕೆ ತಿಳಿಯದೇ ಉಳಿದಿತ್ತು.
ಶವವು ಸಂಪೂರ್ಣವಾಗಿ ಕೊಳೆತು ಹಾಳಾಗಿದ್ದರಿಂದ ಸ್ಥಳೀಯರು ಹತ್ತಿರ ಹೋಗಲು ಹಿಂದೇಟು ಹಾಕಿದರು. ಈ ವೇಳೆ ಸಮಾಜಸೇವಕ ಆರೀಫ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ನೆರವಾದರು.
ನಂತರ ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸಂಜೆ ವೇಳೆಗೆ ಊರಿಗೆ ಬಂದ ಮಗನಿಗೆ ತಂದೆಯ ಮುಖವನ್ನು ನೋಡುವ ಅವಕಾಶವೂ ಸಿಗಲಿಲ್ಲ. ವಿದೇಶದಲ್ಲಿದ್ದ ಮಗಳು ಕೂಡ ಅಂತ್ಯಕ್ರಿಯೆಗೆ ಆಗಮಿಸಲು ಸಾಧ್ಯವಾಗಲಿಲ್ಲ.
ತಂದೆಯ ಸಾವಿನ ಅರಿವಿಲ್ಲದ ಪತ್ನಿ, ಅಂತಿಮ ಕ್ಷಣದಲ್ಲಿ ಜೊತೆಗಿಲ್ಲದ ಮಕ್ಕಳು — ಈ ದಾರುಣ ಸ್ಥಿತಿ ಕಂಡು ಗ್ರಾಮಸ್ಥರ ಕಣ್ಣು ನೀರಾಯಿತು. ಕೊನೆಗೆ ಸ್ಥಳೀಯರೇ ಮಾನವೀಯತೆ ತೋರಿಸಿ ಅಂತ್ಯಸಂಸ್ಕಾರ ನೆರವೇರಿಸಿದರು.