



ಡೈಲಿವಾರ್ತೆ:18/ಏಪ್ರಿಲ್ /2026

ಪುತ್ತೂರು ಜಾತ್ರೆಯಲ್ಲಿ ಸುಡುಮದ್ದು ದುರಂತ: ಹಲವರಿಗೆ ಸುಟ್ಟ ಗಾಯ, ಪ್ರಕರಣ ದಾಖಲು

ಪುತ್ತೂರು, ಏಪ್ರಿಲ್ 18: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಬೆಡಿ ಉತ್ಸವ ವೇಳೆ ಸುಡುಮದ್ದು ಪ್ರದರ್ಶನದ ಸಂದರ್ಭ ಸಂಭವಿಸಿದ ಅವಘಡದಲ್ಲಿ ಹಲವರು ಸುಟ್ಟ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ಸುಮಂತ್ ಶೆಟ್ಟಿ (20) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಏಪ್ರಿಲ್ 17ರ ರಾತ್ರಿ ಸ್ನೇಹಿತರೊಂದಿಗೆ ಜಾತ್ರೆ ವೀಕ್ಷಿಸಲು ಬಂದಿದ್ದ ಅವರು, ಜಾತ್ರೆ ಗದ್ದೆಯಲ್ಲಿ ನಡೆಯುತ್ತಿದ್ದ ಸುಡುಮದ್ದು ಪ್ರದರ್ಶನವನ್ನು ನೋಡುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ಚಿಮ್ಮಿ ಅವರ ಮೇಲೆ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ.
ಈ ಅವಘಡದಲ್ಲಿ ಸುಮಂತ್ ಶೆಟ್ಟಿ ಸೇರಿದಂತೆ ಭರತ್, ಕೌಶಿಕ್, ಸೌಮ್ಯ, ದೀಪಕ್, ಯಶವಂತ್ ಹಾಗೂ ಮೋಹನ್ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಡುಮದ್ದು ಪ್ರದರ್ಶನದ ವೇಳೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಆರೋಪದ ಮೇರೆಗೆ ಸುಡುಮದ್ದು ನಿರ್ವಹಣೆಗಾರರು, ದೇವಸ್ಥಾನ ವ್ಯವಸ್ಥಾಪನ ಸಮಿತಿ ಹಾಗೂ ಸಂಬಂಧಪಟ್ಟ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಪುತ್ತೂರು ನಗರ ಠಾಣೆಯಲ್ಲಿ ಕ್ರೈಂ ನಂ. 45/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 288, 125(a), 3(5) ಪ್ರಕಾರ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ