ಡೈಲಿವಾರ್ತೆ:19/ಏಪ್ರಿಲ್ /2026

ಉಳ್ಳಾಲ: ನಿರ್ಮಾಣ ಹಂತದ ಲೇಔಟ್ ತಡೆಗೋಡೆ ಕುಸಿತ – ಜೆಸಿಬಿ ಸಹಿತ ವಾಹನಗಳು ಜಖಂ, ತಪ್ಪಿದ ಬಾರೀ ದುರಂತ

ಉಳ್ಳಾಲ: ನಿರ್ಮಾಣ ಹಂತದಲ್ಲಿದ್ದ ಲೇಔಟ್‌ನ ಎತ್ತರದ ಆವರಣ ಗೋಡೆಯೊಂದು ದಿಢೀರ್ ಕುಸಿದು ಬಿದ್ದ ಪರಿಣಾಮ, ಒಳಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೆಸಿಬಿ ಯಂತ್ರವು ಪಕ್ಕದ ರಸ್ತೆಗೆ ಉರುಳಿ ಬಿದ್ದು ಹಲವು ವಾಹನಗಳು ಹಾಗೂ ಮನೆಗಳಿಗೆ ಹಾನಿ ಉಂಟಾದ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಗುರುನಗರದಲ್ಲಿ ಶನಿವಾರ ಸಂಜೆ ನಡೆದಿದೆ.

ಕುಂಪಲ ನಿವಾಸಿ ದೇವೇಶ ಸರಳಾಯ ಅವರು ಗುರುನಗರದ ಶ್ರೀಕೃಷ್ಣ ಮುಖ್ಯಪ್ರಾಣ ದೇವಸ್ಥಾನದ ಸಮೀಪ ನಿರ್ಮಿಸುತ್ತಿದ್ದ ವಸತಿ ಬಡಾವಣೆಯ ಬೃಹತ್ ಆವರಣ ಗೋಡೆಯು ಏಕಾಏಕಿ ಕುಸಿದು ರಸ್ತೆ ಮೇಲೆ ಬಿದ್ದಿದೆ. ಇದೇ ವೇಳೆ ಲೇಔಟ್‌ನಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಯಂತ್ರವು ಗೋಡೆಯೊಡನೆ ಉರುಳಿ ರಸ್ತೆಗೆ ಬಿದ್ದಿದ್ದು, ಚಾಲಕನು ಕ್ಷಣಾರ್ಧದಲ್ಲಿ ಹೊರ ಜಿಗಿದು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕುಸಿದ ಗೋಡೆಯ ಪಕ್ಕದ ರಸ್ತೆಯಲ್ಲಿ ಸಾಮಾನ್ಯವಾಗಿ ಸಂಜೆ ವೇಳೆಯಲ್ಲಿ ಮಕ್ಕಳು ಆಟವಾಡುತ್ತಿದ್ದರೂ, ಘಟನೆ ನಡೆದ ಸಮಯದಲ್ಲಿ ಬಿಸಿಲಿನ ಕಾರಣದಿಂದ ಮಕ್ಕಳು ಹೊರಗಿಲ್ಲದಿದ್ದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ. “ಈ ವೇಳೆ ಮಕ್ಕಳು ಇದ್ದಿದ್ದರೆ ಪರಿಣಾಮ ಭೀಕರವಾಗುತ್ತಿತ್ತು” ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಿವಾಸಿ ಸುಶಿತ್ ರಾವ್ ಅವರ ಕಾರು ಹಾಗೂ ಆಟೋ ರಿಕ್ಷಾ, ರಕ್ಷಿತ್ ಅವರ ಬೈಕ್‌ಗೆ ಹಾನಿಯಾಗಿದ್ದು, ಸಮೀಪದ ಮನೆಗಳ ಆವರಣ ಗೋಡೆಗಳು ಮತ್ತು ಗೇಟ್‌ಗಳು ಸಹ ಜಖಂಗೊಂಡಿವೆ. ಗೋಡೆ ಕುಸಿತದ ರಭಸಕ್ಕೆ ಸುತ್ತಮುತ್ತ ಭಾರೀ ನಷ್ಟ ಉಂಟಾಗಿದೆ.
ಮಳೆಗಾಲದಲ್ಲಿ ಮಣ್ಣು ಒದ್ದೆಯಾಗಿದ್ದರೆ ಅಥವಾ ನೀರಿನ ಹರಿವು ಹೆಚ್ಚಿದ್ದರೆ ಇನ್ನಷ್ಟು ಭೀಕರ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಕಳಪೆ ಕಾಮಗಾರಿ ಮತ್ತು ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷ ರವಿಶಂಕರ, ಸದಸ್ಯರು ಮನೋಜ್ ಕಟ್ಟೆಮನೆ, ಮೋಹನ್ ಶೆಟ್ಟಿ, ಜಯ ಪೂಜಾರಿ ಸೇರಿದಂತೆ ಪುರಸಭಾ ಅಧಿಕಾರಿಗಳು ಮತ್ತು ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ಕ್ರಮಗಳ ಕುರಿತು ತನಿಖೆ ಮುಂದುವರಿದಿದೆ.