ಡೈಲಿವಾರ್ತೆ:22ಏಪ್ರಿಲ್ /2026

ಕಾಪು: ಸ್ಕೂಟಿಗೆ ಬಸ್ ಡಿಕ್ಕಿ – 8 ವರ್ಷದ ಬಾಲಕಿ ಮೃತ್ಯು

ಕಾಪು, ಏಪ್ರಿಲ್ 22: ಕಾಪು ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ತಡೆರಹಿತ ಬಸ್ಸೊಂದು ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ಸ್ಕೂಟಿಯಲ್ಲಿ ತಂದೆಯೊಂದಿಗೆ ಪ್ರಯಾಣಿಸುತ್ತಿದ್ದ 8 ವರ್ಷದ ಬಾಲಕಿ ಸಾತ್ವಿ ಶೆಟ್ಟಿ ತೀವ್ರವಾಗಿ ಗಾಯಗೊಂಡು ಮೃತಪಟ್ಟ ದಾರುಣ ಘಟನೆ ಕಾಪು ಸಾಯಿ ಸರ್ವಿಸ್ ಸ್ಟೇಶನ್ ಸಮೀಪ ಸಂಭವಿಸಿದೆ.

ಮೃತ ಬಾಲಕಿ ಸಾತ್ವಿ ಶೆಟ್ಟಿ ತಂದೆ ನಿತ್ಯಾನಂದ ಶೆಟ್ಟಿ ಅವರೊಂದಿಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ಪರಿಣಾಮ ಗಂಭೀರವಾಗಿ ಗಾಯಗೊಂಡ ಸಾತ್ವಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ಅಪಘಾತದಲ್ಲಿ ನಿತ್ಯಾನಂದ ಶೆಟ್ಟಿ ಅವರಿಗೆ ಸಹ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ದುಬೈಯಲ್ಲಿ ವಾಸವಿದ್ದ ಈ ಕುಟುಂಬವು ಶೀಘ್ರದಲ್ಲೇ ಸ್ವಗ್ರಾಮದಲ್ಲಿ ನೆಲೆಸುವ ಉದ್ದೇಶ ಹೊಂದಿತ್ತು. ಸಾತ್ವಿಗಾಗಿ ಉಡುಪಿಯ ಖಾಸಗಿ ಶಾಲೆಯಲ್ಲಿ ಪ್ರವೇಶಾತಿಯನ್ನೂ ಪೂರ್ಣಗೊಳಿಸಲಾಗಿತ್ತು. ಇನ್ನು ನಾಳೆ ನಿತ್ಯಾನಂದ ಶೆಟ್ಟಿ ಅವರು ದುಬೈಗೆ ತೆರಳಬೇಕಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿರುವುದು ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಅಪಘಾತ ಸಂಭವಿಸಿದ ಸ್ಥಳದಿಂದ ಅವರ ಪೂವಣಿಗುತ್ತು ನಿವಾಸ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿತ್ತು ಎನ್ನಲಾಗಿದೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.