


ಡೈಲಿವಾರ್ತೆ: 28/ಜು./2026


ಕೋಟ ಪೊಲೀಸರ ಭರ್ಜರಿ ಕಾರ್ಯಾಚರಣೆ:
ಕೇರಳಕ್ಕೆ ಅಕ್ರಮ ಸಾಗಾಟ ಮಾಡುತ್ತಿದ್ದ 160 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಜಪ್ತಿ – ಲಾರಿ ಸೇರಿ ₹7.34 ಲಕ್ಷ ಮೌಲ್ಯದ ಸೊತ್ತು ವಶ

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದಲ್ಲಿ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ವಿತರಿಸಬೇಕಿದ್ದ ಉಚಿತ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಜಾಲವನ್ನು ಕೋಟ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿದ್ದು, 160 ಕ್ವಿಂಟಾಲ್ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ವಸಂತ ಕುಮಾರ್, ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿ ಮಹಾಲಕ್ಷ್ಮೀ ಹೋಟೆಲ್ ಎದುರು ಕಾರ್ಯಾಚರಣೆ ನಡೆಸಿ, KA-47-5533 ಸಂಖ್ಯೆಯ ಅಶೋಕ್ ಲೇಲ್ಯಾಂಡ್ ಲಾರಿಯನ್ನು ತಡೆದು ಪರಿಶೀಲಿಸಿದರು.
ಪರಿಶೀಲನೆ ವೇಳೆ ಸುಮಾರು 320 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ 160 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಯಾವುದೇ ಮಾನ್ಯ ಪರವಾನಿಗೆ ಇಲ್ಲದೆ ಕಾಸರಗೋಡಿಗೆ ಸಾಗಾಟ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.
ಕಾರ್ಯಾಚರಣೆಯಲ್ಲಿ ಸುಮಾರು ₹3.84 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ಹಾಗೂ ₹3.50 ಲಕ್ಷ ಮೌಲ್ಯದ ಲಾರಿ ಸೇರಿ ಒಟ್ಟು ₹7.34 ಲಕ್ಷ ಮೌಲ್ಯದ ಸೊತ್ತನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ, ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ನಿಯಂತ್ರಣ ಆದೇಶ–2016 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)–2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು, ಅಕ್ರಮ ಸಾಗಾಟದ ಹಿಂದಿರುವ ಜಾಲದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.