ಡೈಲಿವಾರ್ತೆ: 28/ಜು./2026

ಬಿ ಸಿ ರೋಡಿನಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ ಎಂಬ ದೇಶದ್ರೋಹಿ ಕಾರ್ಯಕ್ರಮದ ಆಯೋಜಕರ ವಿರುದ್ಧ ದೂರು

ಬಂಟ್ವಾಳ : ಬಂಟ್ವಾಳ ತಾಲೂಕಿನ ಬಿ ಸಿ ರೋಡಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಎಂಬ ಸಂಘಟನೆಯು ಭಾರತದ ಸಂವಿಧಾನದ ಆಶಯಗಳಿಗೆ ಮತ್ತು ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿ ‘ಹಿಂದೂ ರಾಷ್ಟ್ರ ಸ್ಥಾಪನೆ’ ಎಂಬ ದೇಶದ್ರೋಹದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದನ್ನು ವಿರೋಧಿಸಿ ಮತ್ತು ಈ ಕಾರ್ಯಕ್ರಮದ ಆಯೋಜಕರ ದೇಶದ್ರೋಹದ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‌ನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಜುಲೈ 29 ರಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಪರವಾಗಿ ಸಾರ್ವಜನಿಕವಾಗಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಚೋದನಕಾರಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಇದು ದೇಶದ ಐಕ್ಯತೆ, ಸಾರ್ವಭೌಮತ್ವ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಈ ಕುರಿತಂತೆ ಅಶ್ರಫ್ ತಲಪಾಡಿ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮುಖತಃ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕರ್ನಾಟಕ ರಾಜ್ಯದ ಡಿಜಿಪಿ ಹಾಗೂ ರಾಜ್ಯ ಗೃಹ ಸಚಿವರಾದ ಪ್ರಿಯಾಂಕಾ ಖರ್ಗೆ ಯವರಿಗೆ ಇಮೇಲ್ (Email) ಮುಖಾಂತರ ದೂರು ಸಲ್ಲಿಸಿ, ಕೂಡಲೇ ಈ ಕಾರ್ಯಕ್ರಮವನ್ನು ತಡೆಹಿಡಿದು, ಆಯೋಜಕರು ಮತ್ತು ಇದರ ಹಿಂದಿರುವ ದುಷ್ಟ ಶಕ್ತಿಗಳ ಮೇಲೆ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ದೂರು ನೀಡಿದ ಸಂದರ್ಭದಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶಾಹುಲ್ ಎಸ್.ಎಚ್, ಜಿಲ್ಲಾ ಸಮಿತಿ ಸದಸ್ಯ ಹನೀಫ್ ಪುಂಜಾಲಕಟ್ಟೆ , ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಕಬೀರ್ ಅಕ್ಕರಂಗಡಿ, ಬಿಸಿ ರೋಡ್ ಸಿಟಿ ಕೌನ್ಸಿಲ್ ಅಧ್ಯಕ್ಷ ಬಶೀರ್ ಪಲ್ಲ ಉಪಸ್ಥಿತರಿದ್ದರು.