ಡೈಲಿವಾರ್ತೆ:22ಏಪ್ರಿಲ್ /2026

ಕಾಂಗ್ರೆಸ್ ವಿರುದ್ಧ ಮುಸ್ಲಿಂ ಉಲೇಮಾಗಳ ಬಂಡಾಯ: ‘ಕೈ’ ಸರ್ಕಾರಕ್ಕೆ ಎಚ್ಚರಿಕೆ

​ಬೆಂಗಳೂರು: ದಾವಣಗೆರೆ ಉಪಚುನಾವಣೆಯ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು (ಉಲೇಮಾಗಳು) ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಪಕ್ಷದ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

​ಸುದ್ದಿಗೋಷ್ಠಿಯಲ್ಲಿ ಆಕ್ರೋಶ:
​ಇಂದು ಬೆಂಗಳೂರಿನಲ್ಲಿ ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಲೇಮಾಗಳು, ಕಾಂಗ್ರೆಸ್ ಪಕ್ಷದೊಳಗಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ದಶಕಗಳಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ, ಅದನ್ನು ಉಳಿಸಿ ಬೆಳೆಸುವಲ್ಲಿ ಮುಸ್ಲಿಂ ಸಮುದಾಯ ಪ್ರಮುಖ ಪಾತ್ರ ವಹಿಸಿದೆ. ಆದರೆ ದಾವಣಗೆರೆ ಚುನಾವಣೆಯ ಸಂದರ್ಭದಲ್ಲಿ ನಮ್ಮ ಸಮುದಾಯದ ಪ್ರಬಲ ನಾಯಕರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ ಎಂದು ಅವರು ಕಿಡಿಕಾರಿದರು.

​ಭರವಸೆಗಳ ಈಡೇರಿಕೆಯಲ್ಲಿ ವಿಫಲ:
​ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಮುಖಂಡರು, ಕಳೆದ ಮೂರು ವರ್ಷಗಳಲ್ಲಿ ಸಮುದಾಯಕ್ಕೆ ನೀಡಿದ ಭರವಸೆಗಳು ಕೇವಲ ಕಾಗದದ ಮೇಲೆ ಉಳಿದಿವೆ ಎಂದು ದೂರಿದ್ದಾರೆ.
​ಹಿಜಾಬ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ.
​ಮುಸ್ಲಿಂ ಸಮುದಾಯದ ಮೀಸಲಾತಿ ಹಿತರಕ್ಷಣೆ ಮಾಡುವಲ್ಲಿ ಸರ್ಕಾರ ಯಾವುದೇ ಗಂಭೀರ ಹೆಜ್ಜೆ ಇಟ್ಟಿಲ್ಲ. ನಮ್ಮ ಸಮುದಾಯ ಸಂಕಷ್ಟದಲ್ಲಿದ್ದಾಗ ಅಥವಾ ಅನ್ಯಾಯವಾದಾಗ ಕೇವಲ ಸಾಂತ್ವನದ ಮಾತುಗಳ ಮೂಲಕ (ಚಾಕಲೇಟ್ ನೀಡಿದಂತೆ) ನಮ್ಮನ್ನು ಸಮಾಧಾನಪಡಿಸಲಾಗುತ್ತಿದೆ ಹೊರತು, ಹಕ್ಕುಗಳ ರಕ್ಷಣೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

​ಅಬ್ದುಲ್ ಜಬ್ಬಾರ್ ಉಚ್ಚಾಟನೆ -ಪಕ್ಷಕ್ಕೆ ಅಂತಿಮ ಗಡುವು:
​ಪಕ್ಷದ ಹಿರಿಯ ನಾಯಕ ಅಬ್ದುಲ್ ಜಬ್ಬಾರ್ ಅವರ ವಿರುದ್ಧದ ಉಚ್ಚಾಟನಾ ಕ್ರಮವು ಸಮುದಾಯದ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.
ಅಬ್ದುಲ್ ಜಬ್ಬಾರ್ ಅವರ ಉಚ್ಚಾಟನೆಯನ್ನು ತಕ್ಷಣವೇ ಹಿಂಪಡೆಯಬೇಕು. ಒಂದು ವೇಳೆ ಪಕ್ಷವು ತನ್ನ ಪಟ್ಟು ಸಡಿಲಿಸದೆ ಹೋದರೆ ಮತ್ತು ನಮ್ಮ ನಾಯಕರನ್ನು ಗೌರವಯುತವಾಗಿ ನಡೆಸಿಕೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಉಲೇಮಾಗಳು ಎಚ್ಚರಿಕೆ ನೀಡಿದ್ದಾರೆ.