



ಡೈಲಿವಾರ್ತೆ:22ಏಪ್ರಿಲ್ /2026

ಮಣೂರು, ಪಡುಕೆರೆಯಲ್ಲಿ
ಎಳೆಬಿಸಿಲು-5 ಬೇಸಿಗೆ ಶಿಬಿರ ಸಮಾರೋಪ

ಕೋಟ: ಗೀತಾನಂದ ಫೌಂಡೇಶನ್ ವತಿಯಿಂದ ಆನಂದ ಸಿ. ಕುಂದರ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ‘ಎಳೆಬಿಸಿಲು-5’ ಒಂದು ವಾರದ ಬೇಸಿಗೆ ಶಿಬಿರವು ಭಾನುವಾರ ಸಮಾರೋಪಗೊಂಡಿತು.
ಈ ಪ್ರಯುಕ್ತ ನಡೆದ ಸಮಾರೋಪ ಸಮಾರಂಭದಲ್ಲಿ ವಾಹಿನಿ ಯುವಕ ಮಂಡಲದ ರಮೇಶ್ ಕುಂದರ್, ಫೌಂಡೇಶನ್‌ನ ವಿಶ್ವಸ್ತರಾದ ದಿವ್ಯಲಕ್ಷ್ಮಿ ಪ್ರಶಾಂತ್ ಕುಂದರ್ ಹಾಗೂ ವೈಷ್ಣವಿ ರಕ್ಷಿತ್ ಕುಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಶಿಬಿರಾರ್ಥಿಗಳಾದ ಕೃತಿ ಕಾರ್ಯಕ್ರಮ ನಿರೂಪಿಸಿ, ರತ್ವಿಕ್ ಸ್ವಾಗತಿಸಿ, ಸಮರ್ಥ್ ವಂದಿಸಿದರು.
ಒಂದು ವಾರದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ, ತಂಡ ನಿರ್ಮಾಣ ಚಟುವಟಿಕೆಗಳು, ಸೇನಾ ಜೀವನದ ಅನುಭವ, ಸಮುದ್ರ ಸಂರಕ್ಷಣೆಯ ಅರಿವು, ನಾಯಕತ್ವ ತರಬೇತಿ, ಪ್ಲಾನಟೋರಿಯಂ ವೀಕ್ಷಣೆ, ನಾಟಕ ಹಾಗೂ ಕ್ರಿಯಾತ್ಮಕ ಗೀತೆಗಳಂತಹ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸಲಾಯಿತು. ಜೊತೆಗೆ ಪರಂಪರೆಯ ಆಟಗಳು ಮತ್ತು ಸಾರ್ವಜನಿಕ ಭಾಷಣ ಕಲೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಪ್ರಯತ್ನವೂ ಮಾಡಲಾಯಿತು.
ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಶಿಬಿರದಲ್ಲಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಿದರು. ಸಾರ್ವಜನಿಕ ಭಾಷಣಗಳ ಮೂಲಕ ತಮ್ಮ ಅಭಿವ್ಯಕ್ತಿಯನ್ನು ತೋರಿದ ವಿದ್ಯಾರ್ಥಿಗಳು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಹಾಗೂ ತರಬೇತುದಾರರು ವಿದ್ಯಾರ್ಥಿಗಳ ಶ್ರಮ ಮತ್ತು ಉತ್ಸಾಹವನ್ನು ಮೆಚ್ಚಿ, ಇಂತಹ ಶಿಬಿರಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಸಂಯೋಜಕರಾದ ರವಿಕಿರಣ್ ಕೋಟ ಮತ್ತು ದೀಕ್ಷಿತ ಸಂಯೋಜಿಸಿದರು. ಶಿಬಿರವು ವಿದ್ಯಾರ್ಥಿಗಳಿಗೆ ಸ್ಮರಣೀಯ ಹಾಗೂ ಪ್ರೇರಣಾದಾಯಕ ಅನುಭವವಾಗಿ ಪರಿಣಮಿಸಿತು.