ಡೈಲಿವಾರ್ತೆ: 27/ಜು./2026

ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ದಿಢೀರ್ ದಾಳಿ ನಡೆಸಿ ತೀವ್ರ ತರಾಟೆಗೆ ತೆಗೆದುಕೊಂಡ ಮಹಿಳಾ ತಂಡ

ಮಂಗಳೂರು, ಜುಲೈ 27: ಮಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಚೇರಿಯ ಡಿ ಗ್ರೂಪ್ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳಾ ತಂಡ ಕಚೇರಿಗೆ ದಿಢೀರ್ ಭೇಟಿ ನೀಡಿ ಎಪಿಎಂಸಿ ಕಾರ್ಯದರ್ಶಿ ಸಿ.ಎಚ್. ಮೋಹನ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.
ಡಿ ಗ್ರೂಪ್ ಮಹಿಳಾ ಉದ್ಯೋಗಿಗೆ ಕಾರ್ಯದರ್ಶಿ ಪದೇ ಪದೇ ಕಿರುಕುಳ ನೀಡುತ್ತಿದ್ದು, ಹಣದ ಆಮಿಷವೊಡ್ಡಿ ಲೈಂಗಿಕವಾಗಿ ಕಿರುಕುಳ ನೀಡಲು ಯತ್ನಿಸಿದ್ದಾರೆಯೆಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ ಸೋಮವಾರ ಹಸಿರು ಸೀರೆ ಧರಿಸಿ ಕಚೇರಿಗೆ ಬನ್ನಿ ಎಂದು ಮಹಿಳಾ ಉದ್ಯೋಗಿಗೆ ಸೂಚನೆ ನೀಡಿದ್ದರೆಂಬ ಆರೋಪವೂ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಈ ಆರೋಪಗಳ ಬೆನ್ನಲ್ಲೇ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳಾ ತಂಡವೂ ಹಸಿರು ಸೀರೆ ಧರಿಸಿ ಎಪಿಎಂಸಿ ಕಚೇರಿಗೆ ಆಗಮಿಸಿತು. ಕಚೇರಿಗೆ ಪ್ರವೇಶಿಸಿದ ಮಹಿಳೆಯರು ನೀವು ಹೇಳಿದಂತೆ ಹಸಿರು ಸೀರೆ ಧರಿಸಿ ಬಂದಿದ್ದೇವೆ. ಈಗ ಹೇಳಿ ಎಂದು ಕಾರ್ಯದರ್ಶಿಯನ್ನು ನೇರವಾಗಿ ಪ್ರಶ್ನಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬಳಿಕ ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಕುರಿತು ಕಾರ್ಯದರ್ಶಿಯಿಂದ ಸ್ಪಷ್ಟನೆ ಕೇಳಿದ ತಂಡ, ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿಯ ಗೌರವ, ಸುರಕ್ಷತೆ ಮತ್ತು ಘನತೆಗೆ ಧಕ್ಕೆ ತರುವ ಯಾವುದೇ ರೀತಿಯ ವರ್ತನೆಯನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿತು.
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತಂದು, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಮಹಿಳಾ ತಂಡ ಒತ್ತಾಯಿಸಿದೆ.