ಡೈಲಿವಾರ್ತೆ: 27/ಜು./2026

ಕಲ್ಲಡ್ಕ ದುರಂತದ ಬಳಿಕವೇ ಎಚ್ಚೆತ್ತುಕೊಂಡ ಇಲಾಖೆ ಅಧಿಕಾರಿಗಳು: ದಾಖಲೆಗಳಿಲ್ಲದ ನಾಲ್ಕು ಶಾಲಾ ಬಸ್‌ಗಳು ವಶಕ್ಕೆ

ಬಂಟ್ವಾಳ: ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಶಾಲಾ ಬಸ್ ಮೇಲೆ ಬೃಹತ್ ಮರ ಬಿದ್ದು ಪುಟಾಣಿ ಬಾಲಕಿ ಮೃತಪಟ್ಟ ದುರ್ಘಟನೆಯ ಬೆನ್ನಲ್ಲೇ ಜಿಲ್ಲಾಡಳಿತ, ಪೊಲೀಸ್ ಹಾಗೂ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಬಸ್‌ಗಳ ದಾಖಲೆ ಮತ್ತು ಸುರಕ್ಷತಾ ಮಾನದಂಡಗಳ ಪರಿಶೀಲನೆಗೆ ಮುಂದಾಗಿದೆ.

ಈ ಕಾರ್ಯಾಚರಣೆಯ ಅಂಗವಾಗಿ ಸೋಮವಾರ ಬಿ.ಸಿ.ರೋಡ್ ವೃತ್ತದ ಬಳಿ ಬಂಟ್ವಾಳ ನಗರ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಅಧಿಕಾರಿಗಳು ಜಂಟಿಯಾಗಿ ಶಾಲಾ ಬಸ್‌ಗಳ ತಪಾಸಣೆ ನಡೆಸಿದರು.

ಪರಿಶೀಲನೆ ವೇಳೆ ಕೆಲವು ಶಾಲಾ ಬಸ್‌ಗಳ ದಾಖಲೆಗಳು ಸಮರ್ಪಕವಾಗಿಲ್ಲದಿರುವುದು ಹಾಗೂ ನಿಯಮ ಉಲ್ಲಂಘನೆಗಳು ಕಂಡುಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಬರಾಕಾ ವಿದ್ಯಾ ಸಂಸ್ಥೆಗೆ ಸೇರಿದ ಮೂರು ಬಸ್‌ಗಳು ಹಾಗೂ ಬಂಟ್ವಾಳದ ಬಡಕಬೈಲು ಮಜ್ಲಿಸ್ ವಿದ್ಯಾ ಸಂಸ್ಥೆಗೆ ಸೇರಿದ ಒಂದು ಬಸ್ ಗಳು ಸೇರಿದಂತೆ ಅಗತ್ಯ ದಾಖಲೆಗಳು ಇಲ್ಲದ ನಾಲ್ಕು ಬಸ್‌ಗಳನ್ನು ಮುಂದಿನ ಕ್ರಮಕ್ಕಾಗಿ ಸಾರಿಗೆ ಇಲಾಖೆ ವಶಕ್ಕೆ ಪಡೆದಿದೆ.

ಕಲ್ಲಡ್ಕದಲ್ಲಿ ನಡೆದ ಶಾಲಾ ಬಸ್ ಅವಘಡದ ಬಳಿಕ ಬಸ್‌ನ ದಾಖಲೆಗಳ ಪರಿಶೀಲನೆ ವೇಳೆ ಹಲವು ಲೋಪದೋಷಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಶ್ರೀರಾಮ ವಿದ್ಯಾ ಕೇಂದ್ರದ ಆಡಳಿತ ಮಂಡಳಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಶಾಲಾ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಇಂತಹ ತಪಾಸಣೆ ಮತ್ತು ಕಾನೂನು ಕ್ರಮಗಳು ಜಿಲ್ಲೆಯಾದ್ಯಂತ ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುರಂತದ ಬಳಿಕ ಎಚ್ಚೆತ್ತುಕೊಂಡ ಇಲಾಖಾಧಿಕಾರಿಗಳು:
ಈ ಕಾರ್ಯಾಚರಣೆಯ ಸಮಯ ಮತ್ತು ಸಂದರ್ಭವೇ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಶಾಲಾ ಬಾಲಕಿಯೊಬ್ಬಳು ಜೀವ ಕಳೆದುಕೊಂಡ ಐದು ದಿನಗಳ ಬಳಿಕವೇ ಅಧಿಕಾರಿಗಳಿಂದ ವ್ಯಾಪಕ ತಪಾಸಣೆ ಆರಂಭವಾಗಿರುವುದು ಹಲವರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಶಾಲಾ ವಾಹನಗಳ ಫಿಟ್ನೆಸ್, ಪರವಾನಗಿ, ವಿಮೆ, ದಾಖಲೆಗಳು ಹಾಗೂ ಸುರಕ್ಷತಾ ನಿಯಮಗಳ ಪಾಲನೆ ಬಗ್ಗೆ ಪೂರ್ವಭಾವಿಯಾಗಿ ಪರಿಶೀಲನೆ ನಡೆಸದೆ ಇರುವುದು ಸಾರ್ವಜನಿಕರ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಮಕ್ಕಳ ಸುರಕ್ಷತೆ ಎನ್ನುವುದು ಕೇವಲ ದುರಂತದ ನಂತರ ಕೈಗೊಳ್ಳುವ ಕಾರ್ಯಾಚರಣೆಗೆ ಸೀಮಿತವಾಗಬಾರದು. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಷ್ಟೇ ಅಲ್ಲ, ಅಂತಹ ಉಲ್ಲಂಘನೆಗಳು ನಡೆಯದಂತೆ ನಿರಂತರ ತಪಾಸಣೆ ನಡೆಸುವುದು ಸಂಬಂಧಿತ ಇಲಾಖೆಗಳ ಮೂಲಭೂತ ಜವಾಬ್ದಾರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.