ಡೈಲಿವಾರ್ತೆ:25/ಏಪ್ರಿಲ್ /2026

ಕೋಟ: ಮಾನಸಿಕ ಬೇಸರದಿಂದ 65ರ ಮಹಿಳೆ ನೇಣಿಗೆ ಶರಣು

ಕೋಟ: ಬ್ರಹ್ಮಾವರ ತಾಲೂಕಿನ ನಂಚಾರು ಗ್ರಾಮದಲ್ಲಿ ಮಾನಸಿಕ ಬೇಸರದಿಂದ ಜೀವನಕ್ಕೆ ಜಿಗುಪ್ಸೆಗೊಂಡಿದ್ದ ವೃದ್ಧೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೆಳಕಿಗೆ ಬಂದಿದೆ.

ಪಿರ್ಯಾದಿದಾರರಾದ ಹರೀಶ (27) ಅವರ ತಾಯಿ, ಸುಮಾರು 65 ವರ್ಷ ಪ್ರಾಯದ ಮಹಿಳೆ, ಮನೆಯಲ್ಲಿ ಗೇರು ಬೀಜ ಕಟ್ಟಿಂಗ್ ಪ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ಬೇಸರಗೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ, ದಿನಾಂಕ 24.04.2026ರ ರಾತ್ರಿ 11.30 ಗಂಟೆಯಿಂದ 25.04.2026ರ ಬೆಳಿಗ್ಗೆ 6.00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಸಮೀಪವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ತಿಳಿದ ತಕ್ಷಣ ಸ್ಥಳೀಯರು ಮತ್ತು ಕುಟುಂಬಸ್ಥರು ತಕ್ಷಣ ಕ್ರಮ ಕೈಗೊಂಡರೂ, ಆಗಲೇ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.

ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್‌ ಪ್ರಕರಣ ಸಂಖ್ಯೆ 18/2026 ದಾಖಲಿಸಿಕೊಂಡಿದ್ದು, ಭಾ.ನ್ಯಾಯ ಸಂಹಿತೆಯ ಕಲಂ 194ರಂತೆ ತನಿಖೆ ಮುಂದುವರಿದಿದೆ.