ಡೈಲಿವಾರ್ತೆ:26/ಏಪ್ರಿಲ್ /2026

ರೈಲಿನಲ್ಲಿ ಹೆರಿಗೆ: ಬಿಸಿರೋಡಿನಲ್ಲಿ ಬೋಗಿಯಲ್ಲೇ ಗಂಡು ಮಗು ಜನನ, ತಾಯಿ-ಮಗು ಆಸ್ಪತ್ರೆಗೆ ದಾಖಲು

ಬಂಟ್ವಾಳ, ಏಪ್ರಿಲ್ 26: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡು, ಬಿಸಿರೋಡಿನ ರೈಲು ನಿಲ್ದಾಣದಲ್ಲಿ ಬೋಗಿಯೊಳಗೆಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಮೈಸೂರು ಜಿಲ್ಲೆಯ ಸವಣೂರು ನಿವಾಸಿ ಪೊನ್ನಮ್ಮ ಅವರು ಹೆರಿಗೆಗೊಂಡ ಮಹಿಳೆಯಾಗಿದ್ದಾರೆ.

ಮಂಗಳೂರಿನಲ್ಲಿ ರೈಲು ಹತ್ತಿದ್ದ ಅವರು ಪ್ರಯಾಣದ ವೇಳೆ ಅಸ್ವಸ್ಥತೆಯನ್ನು ಅನುಭವಿಸಿ, ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ತಕ್ಷಣ ನೆರವಿಗೆ ಧಾವಿಸಿ ಪ್ರಾಥಮಿಕ ಆರೈಕೆ ನೀಡಿದ್ದು, ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸೂಚನೆ ದೊರಕುತ್ತಿದ್ದಂತೆಯೇ ರೈಲ್ವೆ ಇಲಾಖೆ ತುರ್ತು ಕ್ರಮ ಕೈಗೊಂಡು, ಬಿಸಿರೋಡಿನ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿತು. ಸ್ಥಳೀಯ ಸೋಮಯಾಜಿ ಆಸ್ಪತ್ರೆಗೆ ಸೇರಿದ ವೈದ್ಯರ ತಂಡವನ್ನು ತಕ್ಷಣ ಸ್ಥಳಕ್ಕೆ ಕರೆಸಿ, ರೈಲು ಬೋಗಿಯೊಳಗೆಯೇ ಸುರಕ್ಷಿತವಾಗಿ ಹೆರಿಗೆ ನಡೆಯುವಂತೆ ವ್ಯವಸ್ಥೆ ಮಾಡಲಾಯಿತು. ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆಯನ್ನು ನೆರವೇರಿಸಿದೆ.
ಹೆರಿಗೆಯ ಬಳಿಕ ತಾಯಿ ಮತ್ತು ಮಗುವನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯಕೀಯ ಮೂಲಗಳ ಪ್ರಕಾರ ತಾಯಿ ಮತ್ತು ಮಗು ಇಬ್ಬರೂ ಸ್ಥಿರ ಸ್ಥಿತಿಯಲ್ಲಿದ್ದರೂ ಹೆಚ್ಚಿನ ನಿಗಾ ಅಗತ್ಯವಿದೆ ಎಂದು ತಿಳಿದುಬಂದಿದೆ.
ಸಂಜೆ 7.20ರ ಸುಮಾರಿಗೆ ಬಿಸಿರೋಡಿಗೆ ಆಗಮಿಸಿದ್ದ ರೈಲು, ಹೆರಿಗೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸುಮಾರು ಒಂದು ಗಂಟೆ ಕಾಲ ನಿಲ್ದಾಣದಲ್ಲೇ ನಿಂತಿದ್ದು, ರಾತ್ರಿ 8.20ಕ್ಕೆ ಮುಂದಿನ ಗಮ್ಯಸ್ಥಾನದತ್ತ ಪ್ರಯಾಣ ಮುಂದುವರಿಸಿದೆ.

ಘಟನೆಯ ವೇಳೆ ಕೈಕಂಬದ ಸಮದ್, ಬಂಟ್ವಾಳ ನಗರ ಠಾಣೆಯ ಪೊಲೀಸರು ಹಾಗೂ ಸಾರ್ವಜನಿಕರು ಸಹಕರಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದಾರೆ. ಮಂಗಳೂರು ರೈಲ್ವೆ ಪೊಲೀಸ್ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದು, ಹೆಚ್ಚಿನ ವಿವರಗಳನ್ನು ಕಲೆಹಾಕುತ್ತಿದ್ದಾರೆ.
ಪೊನ್ನಮ್ಮ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಿದ್ದರೂ, ಇದನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ.