



ಡೈಲಿವಾರ್ತೆ:26/ಏಪ್ರಿಲ್ /2026

ಚಾರ್ಮಾಡಿ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ, 25ಕ್ಕೂ ಹೆಚ್ಚು ಮಂದಿಗೆ ಗಾಯ

ಬೆಳ್ತಂಗಡಿ, ಏಪ್ರಿಲ್ 26: ಅಪಾಯಕಾರಿ ತಿರುವುಗಳಿಗೆ ಪ್ರಸಿದ್ಧವಾಗಿರುವ ಚಾರ್ಮಾಡಿ ಘಾಟಿಯಲ್ಲಿ ಮತ್ತೊಂದು ಭಾರೀ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಸುಮಾರು 25 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಭಾನುವಾರ ಆತಂಕ ಮೂಡಿಸಿದೆ.
ಘಾಟಿಯ ನಾಲ್ಕನೇ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಧರ್ಮಸ್ಥಳದಿಂದ ಮೂಡಿಗೆರೆ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ ತೀವ್ರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಮಧ್ಯೆಯೇ ಪಲ್ಟಿಯಾಗಿದೆ. ಈ ಪ್ರದೇಶವು ಆಳವಾದ ಕಂದಕಗಳನ್ನು ಹೊಂದಿರುವುದರಿಂದ ಬಸ್ ಪ್ರಪಾತಕ್ಕೆ ಉರುಳುವ ಭೀತಿ ಉಂಟಾಗಿದ್ದರೂ, ಅದೃಷ್ಟವಶಾತ್ ರಸ್ತೆಯಲ್ಲೇ ಪಲ್ಟಿಯಾದ ಕಾರಣ ಭಾರೀ ದುರಂತ ತಪ್ಪಿದಂತಾಗಿದೆ.
ಅಪಘಾತದ ಪರಿಣಾಮವಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 25 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪಲ್ಟಿಯಾದ ಬಸ್ಸನ್ನು ತೆರವುಗೊಳಿಸಿ, ಘಾಟಿ ಮಾರ್ಗದಲ್ಲಿ ಸಂಚಾರವನ್ನು ಪುನಃ ಸುಗಮಗೊಳಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕಡಿದಾದ ತಿರುವುಗಳಲ್ಲಿ ಅತಿವೇಗ ಮತ್ತು ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.