ಡೈಲಿವಾರ್ತೆ:29/ಏಪ್ರಿಲ್ /2026

ಮರವಂತೆ ಕಡಲತೀರದಲ್ಲಿ ಪ್ರವಾಸಿ ಬಸ್ ಭೀಕರ ಅಪಘಾತ: ಇಬ್ಬರು ಸಾವು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

​ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ-ಮರವಂತೆ ಸಮುದ್ರತೀರದ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದ ಸರಣಿ ಅಪಘಾತದಲ್ಲಿ ಬಸ್ ಚಾಲಕ ಹಾಗೂ ಅಡುಗೆ ಸಿಬ್ಬಂದಿ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿವಮೊಗ್ಗದ ಶಂಕರಘಟ್ಟ ರಂಭಾಪುರಿ ಕಾಲೇಜಿನ ಪ್ರವಾಸಿ ಬಸ್, ಗ್ಯಾಸ್ ಟ್ಯಾಂಕರ್ ಹಾಗೂ ಲಾರಿಗಳ ನಡುವೆ ಈ ಭೀಕರ ಸರಣಿ ಅಪಘಾತ ನಡೆದಿದ್ದು, 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

​ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ರಂಭಾಪುರಿ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಕೇರಳ ನೋಂದಣಿಯ ಖಾಸಗಿ ಬಸ್ಸಿನಲ್ಲಿ ಹೊರಟಿದ್ದರು. ಬಸ್ಸಿನಲ್ಲಿ 24 ವಿದ್ಯಾರ್ಥಿಗಳು ಹಾಗೂ 23 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 50 ಮಂದಿ ಇದ್ದರು. ಮುರ್ಡೇಶ್ವರ ಪ್ರವಾಸ ಮುಗಿಸಿ ಬುಧವಾರ ಬೆಳಿಗ್ಗೆ ಉಡುಪಿಯ ದೇವಸ್ಥಾನಗಳ ದರ್ಶನಕ್ಕೆಂದು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

​ನಿಯಂತ್ರಣ ತಪ್ಪಿ ನಡೆದ ಸರಣಿ ಡಿಕ್ಕಿ:
​ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ, ಮರವಂತೆ ಕಡಲತೀರದ ಸೌಂದರ್ಯವನ್ನು ವೀಕ್ಷಿಸುತ್ತಾ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್, ವೇಗವಾಗಿ ಹೋಗಿ ಮೊದಲು ಮಹಾರಾಷ್ಟ್ರ ಮೂಲದ ಗ್ಯಾಸ್ ಟ್ಯಾಂಕರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬಸ್ ಮುಂದೆ ಚಲಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ತಮಿಳುನಾಡು ಮೂಲದ ಗೂಡ್ಸ್ ಲಾರಿಗೂ ಹಿಂಬದಿಯಿಂದ ಅಪ್ಪಳಿಸಿದೆ. ಅಪಘಾತದ ಭೀಕರತೆಗೆ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಗ್ಯಾಸ್ ಟ್ಯಾಂಕರ್ ಕೂಡ ಜಖಂಗೊಂಡಿದೆ.

​ರಕ್ಷಣಾ ಕಾರ್ಯಾಚರಣೆ ಮತ್ತು ಸ್ಥಳಕ್ಕೆ ಭೇಟಿ
​ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಆಪದ್ಬಾಂಧವ 24*7 ಅಂಬ್ಯುಲೆನ್ಸ್‌ನ ಇಬ್ರಾಹಿಂ ಗಂಗೊಳ್ಳಿ ಮತ್ತು ಅವರ ತಂಡ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ಕೈಗೊಂಡಿತು. ಬಸ್ಸಿನ ಅವಶೇಷಗಳ ನಡುವೆ ಸಿಲುಕಿದ್ದ ಮೃತದೇಹಗಳನ್ನು ಹಾಗೂ ಗಂಭೀರವಾಗಿ ಗಾಯಗೊಂಡಿದ್ದ ಆರು ಮಂದಿ ಸೇರಿದಂತೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯಿತು.
​ವಿಷಯ ತಿಳಿದ ಕೂಡಲೇ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಡಿವೈಎಸ್ಪಿ ಕುಲಕರ್ಣಿ, ಗಂಗೊಳ್ಳಿ ಎಸೈ ಪವನ್ ನಾಯಕ್ ಹಾಗೂ ಪೊಲೀಸ್ ತಂಡ ಸ್ಥಳ ಪರಿಶೀಲನೆ ನಡೆಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.
​ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.