ಡೈಲಿವಾರ್ತೆ:28/ಏಪ್ರಿಲ್ /2026

ಬಂಟ್ವಾಳ: ಬ್ರಹ್ಮರಕೋಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ” ಜನಾಂದೋಲನ ನಡಿಗೆ”

ಬಂಟ್ವಾಳ : ಬ್ರಹ್ಮರಕೋಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ “ಜನಾಂದೋಲನ ನಡಿಗೆಯು” ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತ್ರತ್ವದಲ್ಲಿ ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತನಕ ನಡೆಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನಿಯಮ‌ ಉಲ್ಲಂಘಿಸಿ ಕಾರ್ಯಚರಿಸುತ್ತಿರುವ ಈ ಅನಗತ್ಯ ಮತ್ತು ಅವೈಜ್ಞಾನಿಕ , ಜನವಿರೋಧಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಹೋರಾಟ ನಡೆಯುತ್ತಿದ್ದು, ತಾರ್ಕಿಕ ಹಂತ ಸಿಗುವವರೆಗೆ ಈ ಹೋರಾಟ ಮುಂದುವರಿಯಲಿದೆ ಎಂದ ಅವರು, ಇದೀಗ ಜಿಲ್ಲೆಯ ಅಲ್ಲಲ್ಲಿ ಹೊಸತಾಗಿ ಅನೇಕ ಟೋಲ್ ಗಳು ಬರುತ್ತಿದೆ,ಅಂತಹ ಸಂದರ್ಭದಲ್ಲಿ ಕೇಂದ್ರದ ನಿಯಮಗಳನ್ನು ಮೀರಿ ಅಲ್ಲಲ್ಲಿ ಟೋಲ್ ಗಳು ತಲೆ ಎತ್ತುತ್ತಿದ್ದು, ಕೇಂದ್ರದ ಸಚಿವರಿಗೆ ಹಾಗೂ ಈ ಭಾಗದ ಸಂಸದರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ ಜೊತೆಗೆ ಕೇಂದ್ರ ಸರಕಾರದ ಅಧಿಕಾರಿಗಳಿಗೆ , ಹಾಗೂ ಬಿಜೆಪಿ ಸರಕಾರಕ್ಕೆ ಎಚ್ಚರಿಕೆಯನ್ನು ಕೊಡುವ ಉದ್ದೇಶದಿಂದ ಜಾತ್ಯಾತೀತ ಚಳುವಳಿ ಇದಾಗಿದೆ.ಟೋಲ್ ಗೇಟ್ ತೆರವು ವಿಚಾರವಾಗಿ ಜನತೆ ನಮ್ಮ ಜೊತೆಗೆ ಕೊನೆಯ ತನಕ ಇರಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮುನೀರ್ ಕಾಟಿಪಳ್ಳ ಅವರು ಸುರತ್ಕಲ್ ಟೋಲ್ ಬಂದ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಬ್ರಹ್ಮರಕೋಟ್ಲು ಕೋಟ್ಲು ತೆರವು ಮಾಡುವುದು ನಿಶ್ಚಿತ ಎಂದರು.

ಮುನೀರ್ ಕಾಟಿಪಳ್ಳ ಮಾತನಾಡಿ ಬಿ.ಸಿ.ರೋಡಿನಿಂದ ಬ್ರಹ್ಮರಕೋಟ್ಲುವರೆಗೆ ಜನಾಂದೋಲನ ನಡಿಗೆಯು ಹೋರಾಟ ಸಮಿತಿಯ ಐಕ್ಯತೆಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಕೇಂದ್ರ ಸರಕಾರ ಹಾಗೂ ನಿತಿನ್ ಗಡ್ಕರಿ ಅವರಿಗೆ ಸಂದೇಶ ಕಳಿಸುವ ಕೆಲಸ ಮಾಡಿದ್ದೇವೆ, ಹೋರಾಟದ ಪ್ರಥಮ‌ ಹಂತ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಟೋಲ್ ಗೇಟ್ ತೆರವು ಹೋರಾಟ ಸಮಿತಿ ಸಂಚಾಲಕರಾದ ಮೋಹನ್ ಶೆಟ್ಟಿ, ಬಿ.ಶೇಖರ್, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ಎಲ್ ರೋಡ್ರಿಗಸ್, ಎಂ‌.ಎಸ್. ಮಹಮ್ಮದ್, ಸುಹೈಲ್ ಖಂದಕ್, ಬೇಬಿ ಕುಂದರ್, ಪದ್ಮಶೇಖರ್ ಜೈನ್, ಸುದೀಪ್ ಕುಮಾರ್ ಶೆಟ್ಟಿ, ಎ.ಉಸ್ಮಾನ್ ಕರೋಪಾಡಿ, ಅಶ್ವಿನಿ ಕುಮಾರ್ ರೈ, ಜೋಕಿಂ ಡಿ.ಸೋಜ, ಸುಭಾಶ್ಚಂದ್ರ ಶೆಟ್ಟಿ ಕೊಲ್ನಾಡು, ಅಬ್ಬಾಸ್ ಆಲಿ, ಮಾಯಿಲಪ್ಪ ಸಾಲ್ಯಾನ್, ಮಮತಾ ಗಟ್ಟಿ, ಐಡಾ ಸುರೇಶ್, ಸಾಲೆಟ್ ಪಿಂಟೋ, , ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಸುರೇಶ್ ಪೂಜಾರಿ, ಎ.ಬಿ.ಅಬ್ದುಲ್ಲ ಕೊಲ್ನಾಡು, ಫಾರೂಕ್ ಬಯಬೆ, ಕೆ.ಕೆ.ಸಾಹುಲ್ ಹಮೀದ್, ಮಹಮ್ಮದ್ ಆಲಿ ಪುತ್ತೂರು, ಬಿ.ಎಂ.ಭಟ್, ಸುರೇಶ್ ಕುಮಾರ್ ಬಂಟ್ವಾಳ, ಎ.ರಾಮಣ್ಣ ವಿಟ್ಲ, ಕೆ.ಎಮ್. ಮುಸಾಫ ಸುಳ್ಯ, ರಾಧಕೃಷ್ಣ ಬೊಳ್ಳೂರು, ಭರತ್ ಮುಂಡೋಡಿ, ಪಿ.ಸಿ. ಜಯರಾಮ್, ವೆಂಕಪ್ಪ ಗೌಡ, ದಿನೇಶ್ ಅಂಬೆಕಲ್ಲು, ಶಾಫಿ, ಇಬ್ರಾಹಿಂ ನವಾಜ್ ಬಡಕಬೈಲು, ಲುಕ್ಕಾನ್ ಬಂಟ್ವಾಳ, ಸುಧಾಕರ ಶೆಣೈ, ಮ್ಯಾಕ್ಸಿಮ್ ಡಿ.ಸೋಜ ಕುಕ್ಕಾಜೆ, ಶಶಿಧರ ಹೆಗ್ಡೆ, ಪೃಥ್ವಿರಾಜ್‌, ನವೀನ್ ಡಿಸೋಜ, ಕೆ.ಅಶ್ರಫ್ ಮಂಗಳೂರು, ಡಾ.ರಾಜರಾಮ್, ಪಿ.ಎಸ್. ಗಂಗಾಧರ್, ಮಹೇಶ್ ಬೆಳ್ಲಾರರ್ಕರ್ , ಕೇಶವ ಮೊರಂಗಲ್ಲು, ಜಯಪ್ರಕಾಶ್ , ಧರ್ಮಪಾಲ ಮತ್ತಿತರರು ಉಪಸ್ಥಿತರಿದ್ದರು.

ಟೋಲ್ ಗೇಲ್ ಜನಾಂದೋಲನ ನಡಿಗೆ ಟೋಲ್ ಗೇಟ್ ಸಮೀಪ ತಲುಪುತ್ತಿದ್ದಂತೆ ಆಕ್ರೋಶಿತ ಗುಂಪೊಂದು ಟೋಲ್ ಪ್ಲಾಜದೊಳಗೆ ನುಗ್ಗಲು ಯತ್ನಿಸಿದ ಘಟನೆ ನಡೆಯಿತು. ಇದೇ ವೇಳೆ ಟೋಲ್ ಸಿಬ್ಬಂದಿಯೊಬ್ಬರು ಉದ್ದಟತನದಿಂದ ವರ್ತಿಸಿದ್ದಾರೆಂದು ಆರೋಪಿಸಿ ಆಕ್ರೋಶಿತ ಗುಂಪು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಯಿತು.ಈ ವೇಳೆ ಪರಿಸ್ಥಿತಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸ್ ನಿರೀಕ್ಷಕ ಆನಂತ ಪದ್ಮನಾಭ ಮತ್ತು ಸಿಬ್ಬಂದಿಗಳು ಪರಿಸ್ಥಿತಿ ನಿಭಾಯಿಸಿದರು.

ಈ ಘಟನೆಯಿಂದ ಹೆದ್ದಾರಿಯಲ್ಲಿ ಸುಮಾರು 20 ನಿಮಿಷಗಳ ಕಾಲ ಆತಂಕದ ಸ್ಥಿತಿ ನಿರ್ಮಾಣ ಗೊಂಡಿತ್ತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕೆ.ಎಸ್.ಆರ್.ಪಿ. ಪೋಲೀಸ್ ನಿಯೋಜನೆ ಮಾಡಲಾಗಿತ್ತು.