



ಡೈಲಿವಾರ್ತೆ: 01/ಮೇ/2026

ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ವಿರುದ್ಧ ಪೆಟ್ರೋಲ್ ಬಾಂಬ್ ಸ್ಫೋಟದ ರೀಲ್ಸ್ ಆರೋಪ: ಪೊಲೀಸರಿಂದ ಸ್ವಯಂ ಪ್ರೇರಿತ ಕೇಸ್ ದಾಖಲು

ರಾಮನಗರ: ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆಗಾಗಿ ಅಪಾಯಕಾರಿ ಸಾಹಸಕ್ಕಿಳಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಮತ್ತೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಮಾದರಿಯ ವಸ್ತುವನ್ನು ಸ್ಫೋಟಿಸಿ ರೀಲ್ಸ್ ಮಾಡಿದ ಹಿನ್ನೆಲೆಯಲ್ಲಿ ಕನಕಪುರದ ಕಗ್ಗಲೀಪುರ ಠಾಣೆ ಪೊಲೀಸರು ರಜತ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ರಸ್ತೆಯ ವಡೇರಹಳ್ಳಿಯ ಸಾರ್ವಜನಿಕ ರಸ್ತೆಯಲ್ಲಿ ರಜತ್ ಕಿಶನ್ ಹಾಗೂ ಅವರ ತಂಡ ಇತ್ತೀಚೆಗೆ ಚಿತ್ರೀಕರಣ ನಡೆಸಿತ್ತು. ಈ ವೇಳೆ ರಜತ್ ಬೈಕ್‌ನಲ್ಲಿ ಬರುವಾಗ ಹಿನ್ನೆಲೆಯಲ್ಲಿ ಪೆಟ್ರೋಲ್ ಬಾಂಬ್ ಮಾದರಿಯ ವಸ್ತುವನ್ನು ಸ್ಫೋಟಿಸಲಾಗಿತ್ತು. ಈ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ವಿವಾದಾತ್ಮಕ ರೀಲ್ಸ್‌ಗೆ ಸಂಬಂಧಿಸಿದಂತೆ ರಜತ್ ಕ್ಷಮೆಯಾಚಿಸಿದ್ದರೂ ಸಹ, ಕೃತ್ಯದ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಸ್ಥಳ ಮಹಜರು ಮತ್ತು ತನಿಖೆ:
ಶುಕ್ರವಾರ (ಮೇ 1) ಕಗ್ಗಲೀಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಡಿವೈಎಸ್‌ಪಿ ಶ್ರೀನಿವಾಸ್ ಅವರು ಸಾರ್ವಜನಿಕ ಶಾಂತಿಗೆ ಭಂಗ ತರುವುದು, ಅನುಚಿತ ವರ್ತನೆ, ರಸ್ತೆ ನಿಯಮಗಳ ಉಲ್ಲಂಘನೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಬಿಎನ್‌ಎಸ್‌ನ ವಿವಿಧ ಕಲಂಗಳ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ರಜತ್‌ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಮರುಕಳಿಸಿದ ವರ್ತನೆ:
ರಜತ್ ಕಿಶನ್ ಈ ಹಿಂದೆಯೂ ಇಂತಹದ್ದೇ ಕೃತ್ಯ ಎಸಗಿ ಜೈಲು ಪಾಲಾಗಿದ್ದರು. ಕಳೆದ ಮಾರ್ಚ್‌ನಲ್ಲಿ ಮಾರಕಾಸ್ತ್ರ (ಮಚ್ಚು) ಹಿಡಿದು ರೀಲ್ಸ್ ಮಾಡಿದ್ದಕ್ಕಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಬಸವೇಶ್ವರ ನಗರ ಪೊಲೀಸರು ಇವರನ್ನು ಬಂಧಿಸಿದ್ದರು. ಆಗ ನ್ಯಾಯಾಲಯವು ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಕಠಿಣ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಇದೀಗ ಮತ್ತೆ ಅಂತಹದ್ದೇ ಕೃತ್ಯ ಎಸಗಿರುವುದು ಅವರ ಜಾಮೀನು ರದ್ದತಿಗೂ ಕಾರಣವಾಗುವ ಸಾಧ್ಯತೆಯಿದೆ.