ಡೈಲಿವಾರ್ತೆ:16/ಆಗಸ್ಟ್ /2026

ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ಸಾಗಾಟ: ಬಂಟ್ವಾಳದಲ್ಲಿ ಬೆಂಗಳೂರು ಮೂಲದ ಆರೋಪಿ ಬಂಧನ

ಬಂಟ್ವಾಳ: ಕೋಟಿಗೂ ಮೀರಿದ ಮಾದಕ ವಸ್ತು ಸಾಗಾಟ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮಾದಕ ವಸ್ತುಗಳ ಸಹಿತ ಬೆಂಗಳೂರು ಮೂಲದ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಅಮೈ ಎಂಬಲ್ಲಿ ಆಗಸ್ಟ್ 15 ರಂದು ತಡ ರಾತ್ರಿ ವೇಳೆ ನಡೆದಿದೆ.

ಬಂಧಿತ ಆರೋಪಿಯನ್ನು ಬೆಂಗಳೂರು-ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಎಂದು ಹೆಸರಿಸಲಾಗಿದೆ.

ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಮಂಜುನಾಥ್ ಟಿ ಅವರಿಗೆ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮಾದಕ ವಸ್ತು ಸಾಗಾಟ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ತಡ ರಾತ್ರಿ ಸಿಬ್ಬಂದಿಗಳೊಂದಿಗೆ ಕೆಎ01 ಎಂಎ1284 ನೋಂದಣಿ ಸಂಖ್ಯೆಯ ಕಾರನ್ನು ತಡೆದು ಆರೋಪಿ ಚಾಲಕನನ್ನು ವಿಚಾರಿಸಿದಾಗ ಮಾದಕ ವಸ್ತು ಸಾಗಾಟ ಕೃತ್ಯ ಬೆಳಕಿಗೆ ಬಂದಿದೆ.

ಮಾದಕ ವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಚಾಲಕ ಒಪ್ಪಿಕೊಂಡ ಹಿನ್ನಲೆಯಲ್ಲಿ ಪೊಲೀಸರು ಕಾರನ್ನು ಪರಿಶೀಲನೆ ನಡೆಸಿದ್ದು, ಕಾರಿನಲ್ಲಿ 53,86,300/- ರೂಪಾಯಿ ಮೌಲ್ಯದ 538.63 ಗ್ರಾಂ ಎಂಡಿಎಂಎ ಹಾಗೂ 49.56 ಲಕ್ಷ ರೂಪಾಯಿ ಮೌಲ್ಯದ 99.12 ಗ್ರಾಂ ಕೊಕೈನ್ ಸಹಿತ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ ಮೊದಲಾದ ಸೊತ್ತುಗಳು ಪತ್ತೆಯಾಗಿವೆ. ಇವುಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.