


ಡೈಲಿವಾರ್ತೆ: 29/ಜು./2026

ಬಾಬರಿ ಮಸೀದಿಯಂತೆ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡುತ್ತೇವೆ: ಶಾಸಕ ಯಶ್‌ಪಾಲ್ ಸುವರ್ಣ ವಿವಾದಾತ್ಮಕ ಹೇಳಿಕೆ!

ಉಡುಪಿ, ಜು. 29: ಉಡುಪಿಯಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ ನೀಡಿದ ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ರಾಹುಲ್ ಗಾಂಧಿ, ನಟ ಪ್ರಕಾಶ್ ರಾಜ್ ಹಾಗೂ ಮಣಿಪಾಲದ ಶಿಕ್ಷಣ ಸಂಸ್ಥೆಯ ಕೆಲ ಅಧ್ಯಾಪಕರನ್ನು ಉಲ್ಲೇಖಿಸಿ ಅವರು ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ.
ನಗರದ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, “1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ಮಾದರಿಯಲ್ಲೇ ರಾಹುಲ್ ಗಾಂಧಿ ವಂಶವನ್ನು ಧ್ವಂಸ ಮಾಡಲು ಬಿಜೆಪಿ ಕಾರ್ಯಕರ್ತರು ಹಿಂಜರಿಯುವುದಿಲ್ಲ” ಎಂದು ಹೇಳಿಕೆ ನೀಡಿದರು.
ಅದೇ ವೇಳೆ ನಟ ಪ್ರಕಾಶ್ ರಾಜ್ ಅವರನ್ನು ಉಲ್ಲೇಖಿಸಿ, “ಕರಾವಳಿ ಭಾಗಕ್ಕೆ ಬಂದು ಅಧಿಕ ಪ್ರಸಂಗ ಮಾಡಿದರೆ ಅರಬ್ಬೀ ಸಮುದ್ರದಲ್ಲಿ ತೇಲಬೇಕಾಗುತ್ತದೆ ಅಥವಾ ಮೀನುಗಳಿಗೆ ಆಹಾರವಾಗಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಇದೇ ಭಾಷಣದಲ್ಲಿ ಮಣಿಪಾಲದ ಪ್ರಸಿದ್ಧ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇರಳ ಹಾಗೂ ತಮಿಳುನಾಡು ಮೂಲದ ಏಳು ಮಂದಿ ಅಧ್ಯಾಪಕರ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ ಶಾಸಕ ಸುವರ್ಣ, ಅವರು ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದ್ದು, ಗಾಂಜಾ ಪೂರೈಕೆಯಲ್ಲೂ ತೊಡಗಿದ್ದಾರೆ ಎಂದು ಆರೋಪಿಸಿದರು.
ಈ ಅಧ್ಯಾಪಕರ ಪಟ್ಟಿಯನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ತಿಳಿಸಿದ ಅವರು, ಪೊಲೀಸರು ತಕ್ಷಣ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಉಗ್ರ ಹೋರಾಟ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಶಾಸಕರ ಈ ಹೇಳಿಕೆಗಳು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.