



ಡೈಲಿವಾರ್ತೆ: 03/ಮೇ/2026

ಸಾಮೂಹಿಕ ವಿವಾಹ ವೇದಿಕೆಯಲ್ಲಿ ಅಗ್ನಿ ಅವಘಡ: ಕೂದಲೆಳೆ ಅಂತರದಲ್ಲಿ ಪಾರಾದ ಡಿಕೆಶಿ, ಕಿಚ್ಚ ಸುದೀಪ್ ಹಾಗೂ ಗಣ್ಯರು.!

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಬೃಹತ್ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಸಾವಿರಾರು ಜನ ಸಾಮಾನ್ಯರು ಅಲ್ಪದರಲ್ಲೇ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.
ಘಟನೆಯ ವಿವರ:ಸಿಂಧನೂರಿನ ತಾಲೂಕು ಕ್ರೀಡಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಫೌಂಡೇಷನ್ ವತಿಯಿಂದ 151 ಜೋಡಿಗಳ ಭವ್ಯ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಶುಭ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸ್ಪೀಕರ್ ಯು.ಟಿ. ಖಾದರ್ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್, ಸಚಿವ ಈಶ್ವರ ಖಂಡ್ರೆ ಸೇರಿದಂತೆ ಹಲವು ಶಾಸಕರು ಹಾಗೂ ಗಣ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ತಾಂತ್ರಿಕ ದೋಷದಿಂದಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ.
ವೇದಿಕೆಯ ಹಿಂಭಾಗದಲ್ಲಿ ವಿದ್ಯುತ್ ತಂತಿಗಳ ಘರ್ಷಣೆಯಿಂದ ಕಾಣಿಸಿಕೊಂಡ ಬೆಂಕಿಯ ಕಿಡಿಗಳು ಕ್ಷಣಾರ್ಧದಲ್ಲಿ ವೈಯರ್, ಸ್ಪೀಕರ್ ಹಾಗೂ ಅಲಂಕಾರಿಕ ಬಟ್ಟೆಗಳಿಗೆ ವ್ಯಾಪಿಸಿತು. ಸಚಿವ ಈಶ್ವರ ಖಂಡ್ರೆ ಅವರು ಮಾಧ್ಯಮಗಳೊಂದಿಗೆ ಮಾತನಾಡಲು ಮುಂದಾಗುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿದ್ದವರಲ್ಲಿ ಆತಂಕ ಮೂಡಿಸಿತು. ಗಣ್ಯರು ವೇದಿಕೆಯ ಮೇಲಿರುವಾಗಲೇ ಈ ಘಟನೆ ನಡೆದಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿತ್ತು.
ಅದೃಷ್ಟವಶಾತ್, ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಕಾರ್ಯಪ್ರವೃತ್ತರಾದರು. ತಕ್ಷಣವೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ಕಾರಣ ಯಾವುದೇ ಪ್ರಾಣಾಪಾಯ ಅಥವಾ ದೊಡ್ಡ ಮಟ್ಟದ ಆಸ್ತಿ ಹಾನಿ ಸಂಭವಿಸಿಲ್ಲ.