



ಡೈಲಿವಾರ್ತೆ: 03/ಮೇ/2026

ಬೆಳಗಾವಿ: ಬೇಸಗೆ ರಜೆಯ ಮಜಾಕ್ಕೆ ಜವರಾಯನ ಅಡ್ಡಿ – ಕಪಿಲೇಶ್ವರ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

ಬೆಳಗಾವಿ: ಇಲ್ಲಿನ ಪ್ರಸಿದ್ಧ ಕಪಿಲೇಶ್ವರ ದೇವಾಲಯದ ಹೊಂಡದಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಿನ ಆಳ ತಿಳಿಯದೆ ಮುಳುಗಿ ಸಾವನ್ನಪ್ಪಿರುವ ಭೀಕರ ಘಟನೆ ರವಿವಾರ (ಮೇ 3) ಮುಂಜಾನೆ ಸಂಭವಿಸಿದೆ. ಬೇಸಗೆ ರಜೆಯ ಸಂಭ್ರಮದಲ್ಲಿದ್ದ ಕುಟುಂಬಗಳಲ್ಲಿ ಈ ದುರಂತವು ಮಡುಗಟ್ಟಿದ ಶೋಕವನ್ನು ತಂದಿಟ್ಟಿದೆ.
ಮೃತರನ್ನು ಶಿವಂ ಪರಶುರಾಮ ಸುಂಡೀಕರ್ (7) ಮತ್ತು ಪರಶುರಾಮ ನಿಲಜಕರ್ (11) ಎಂದು ಗುರುತಿಸಲಾಗಿದೆ.
ರವಿವಾರ ಬೆಳ್ಳಂಬೆಳಗ್ಗೆ ಶಾಲೆಗೆ ರಜೆ ಇದ್ದ ಕಾರಣ ಈ ಇಬ್ಬರು ಬಾಲಕರು ನಗರದ ಕಪಿಲೇಶ್ವರ ದೇವಸ್ಥಾನದ ಸಮೀಪವಿರುವ ಹೊಂಡಕ್ಕೆ ಈಜಲೆಂದು ತೆರಳಿದ್ದರು. ಈ ವೇಳೆ ನೀರಿನ ಆಳದ ಅರಿವಿಲ್ಲದೆ ಹೊಂಡಕ್ಕೆ ಇಳಿದ ಬಾಲಕರು ಈಜಲಾಗದೆ ನೀರಿನಲ್ಲಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹೊಂಡದಲ್ಲಿ ಶೋಧ ಕಾರ್ಯ ನಡೆಸಿದರು. ತೀವ್ರ ಕಾರ್ಯಾಚರಣೆಯ ನಂತರ ಇಬ್ಬರೂ ಬಾಲಕರ ಮೃತದೇಹಗಳನ್ನು ಹೊಂಡದಿಂದ ಹೊರತೆಗೆಯಲಾಗಿದೆ. ಮಕ್ಕಳು ಆಟವಾಡುತ್ತಾ ಈಜಲು ತೆರಳಿದ್ದರು, ಆದರೆ ನೀರಿನ ಹರಿವು ಮತ್ತು ಆಳದ ಅಂದಾಜು ಸಿಗದೆ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ವಿಷಯ ತಿಳಿದ ತಕ್ಷಣ ಖಡೇಬಜಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ನೆಚ್ಚಿನ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು. ಬೇಸಗೆಯ ಈ ಸಮಯದಲ್ಲಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.