



ಡೈಲಿವಾರ್ತೆ: 03/ಮೇ/2026

ಕಾರ್ಕಳ: ಆಸ್ತಿಗಾಗಿ ಒಡಹುಟ್ಟಿದವನ ಹತ್ಯೆ; ತಮ್ಮನ ಬಂಧನ

ಕಾರ್ಕಳ: ತಾಲೂಕಿನ ಕಸಬ ಗ್ರಾಮದ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ಆಸ್ತಿ ಹಾಗೂ ಮನೆ ತಕರಾರಿನ ಹಿನ್ನೆಲೆಯಲ್ಲಿ ಅಣ್ಣನನ್ನೇ ತಮ್ಮ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ರಿಚರ್ಡ್ ಡಿಸೋಜ ಎಂದು ಗುರುತಿಸಲಾಗಿದೆ. ರಿಚರ್ಡ್ ಹಾಗೂ ಅವರ ಸಹೋದರ ಹೆರಾಲ್ಡ್ ಡಿಸೋಜ ನಡುವೆ ಜಾಗ ಮತ್ತು ಮನೆಗೆ ಸಂಬಂಧಿಸಿದಂತೆ ಕಳೆದ ಹಲವು ಸಮಯದಿಂದ ಕಾನೂನು ಹಾಗೂ ಕೌಟುಂಬಿಕ ವಿವಾದ ನಡೆಯುತ್ತಿತ್ತು. ಮೇ 3ರಂದು ಮಿತ್ತಬೆಟ್ಟು ಹಿರಿಯಂಗಡಿಯ ವಿವಾದಿತ ಜಾಗದಲ್ಲಿ ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಆರೋಪಿ ಹೆರಾಲ್ಡ್ ಡಿಸೋಜ, ಮರದ ರೀಪು ಅಥವಾ ಹರಿತವಾದ ಆಯುಧದಿಂದ ರಿಚರ್ಡ್ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ರಿಚರ್ಡ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮೃತ ರಿಚರ್ಡ್ ಅವರ ಪತ್ನಿ ಜೆಸಿಂತ ಡಿಸೋಜ ಅವರು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ತೀವ್ರತೆಯನ್ನು ಪರಿಗಣಿಸಿ, ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.
ಡಿವೈಎಸ್‌ಪಿ ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಅಜ್ಮತ್ ಆಲಿ ಹಾಗೂ ಕಾರ್ಕಳ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಆರೋಪಿ ಹೆರಾಲ್ಡ್ ಡಿಸೋಜನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103 (ಕೊಲೆ) ಅಡಿಯಲ್ಲಿ ಅಪರಾಧ ಕ್ರಮಾಂಕ 64/2026ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.