ಡೈಲಿವಾರ್ತೆ: 04/ಮೇ/2026

ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ? ಇಲ್ಲಿದೆ ವಿವರ

ನವದೆಹಲಿ, ಮೇ 4: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಹಲವು ವರ್ಷಗಳ ಸತತ ಪರಿಶ್ರಮದ ನಂತರ ಕೊನೆಗೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರುವ ಹಾದಿಯಲ್ಲಿ ಬಿಜೆಪಿ ನಾಗಾಲೋಟ ಮುಂದುವರೆಸಿದೆ.

ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಮುನ್ನಡೆ ಕಾಯ್ದುಕೊಂಡಿದೆ. ಕೇರಳದಲ್ಲಿ ಎಲ್‌ಡಿಎಫ್ ಮಣಿಸಿ ಮತ್ತೆ ಯುಡಿಎಫ್ ಅಧಿಕಾರಕ್ಕೆ ಏರಲು ಕ್ಷಣಗಣನೆ ಆರಂಭಿಸಿದೆ. ತಮಿಳುನಾಡಿನಲ್ಲಿ ನಟ ದಳಪತಿ ವಿಜಯ ನೇತೃತ್ವದ ಟಿವಿಕೆ ಅಧಿಕಾರ ಹಿಡಿಯುವುದು ಬಹುತೇಕ ನಿಚ್ಚಳವಾಗಿದೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಸ್ಥಿತಿಗತಿ ಇಲ್ಲಿದೆ: ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ294 ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ 293 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ 11.45 ರ ಹೊತ್ತಿಗೆ ಬಿಜೆಪಿ 179 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತಾರೂಢ ಟಿಎಂಸಿ 109 ಕ್ಷೇತ್ರಗಳಲ್ಲಷ್ಟೇ ಮುನ್ನಡೆಯಲ್ಲಿದೆ. ಕಾಂಗ್ರೆಸ್ 2 ಹಾಗೂ ಪಕ್ಷೇತರರು 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವಿನ ನಿಕಟ ಸ್ಪರ್ಧೆಯ ನಡುವೆಯೂ, ಕಾಂಗ್ರೆಸ್ ಪಕ್ಷವು ಮುನ್ನಡೆಯ ವಿಷಯದಲ್ಲಿ ತನ್ನ ಖಾತೆ ತೆರೆದಿದೆ. 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಅಸ್ಸಾಂ ಚುನಾವಣೆ ಫಲಿತಾಂಶ126 ಕ್ಷೇತ್ರಗಳಿರುವ ಅಸ್ಸಾಂನಲ್ಲಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ 11.45 ರ ಹೊತ್ತಿಗೆ ಬಿಜೆಪಿ 101 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 23 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಎಐಯುಡಿಎಫ್ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಪುದುಚೇರಿ ಚುನಾವಣೆ ಫಲಿತಾಂಶ 30 ಕ್ಷೇತ್ರಗಳಿರುವ ಪುದುಚೇರಿಯಲ್ಲಿ ಬಹುಮತಕ್ಕೆ 16 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ 11.45 ರ ಹೊತ್ತಿಗೆ ಬಿಜೆಪಿ 20 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 7 ಹಾಗೂ ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಕೇರಳ ಚುನಾವಣೆ ಫಲಿತಾಂಶ140 ಕ್ಷೇತ್ರಗಳಿರುವ ಕೇರಳದಲ್ಲಿ ಬಹುಮತಕ್ಕೆ 71 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ 11.45 ರ ಹೊತ್ತಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ 96 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಆಡಳಿತಾರೂಢ ಎಲ್​​ಡಿಎಫ್ 42 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಕೇರಳದಲ್ಲಿ ಎಲ್​ಡಿಎಫ್ ಅಧಿಕಾರ ಕಳೆದುಕೊಳ್ಳುವ ಹಾದಿಯಲ್ಲಿದ್ದು, ಅಂತಿಮವಾಗಿ ಸೋಲೊಪ್ಪಿಕೊಂಡಲ್ಲಿ ಭಾರತದಿಂದ ಕಮ್ಯೂನಿಸ್ಟ್ ಪಕ್ಷದ ಆಡಳಿತ ಸಂಪೂರ್ಣ ನಿರ್ಮೂಲನೆ ಯಾದಂತಾಗಲಿದೆ.

ತಮಿಳುನಾಡು ಚುನಾವಣೆ ಫಲಿತಾಂಶ234 ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಮಧ್ಯಾಹ್ನ 11.45 ರ ಹೊತ್ತಿಗೆ ದಳಪತಿ ವಿಜಯ್ ನೇತೃತ್ವದ ಟಿವಿಕೆ 108 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು ಸರಳ ಬಹುಮತದತ್ತ ಸಾಗುತ್ತಿದೆ. ಡಿಎಂಕೆ 53, ಎಐಎಡಿಎಂಕೆ 73 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.