



ಡೈಲಿವಾರ್ತೆ: 04/ಮೇ/2026

ಬಾಗಲಕೋಟೆ ಉಪಸಮರ: ಅನುಕಂಪದ ಅಲೆ ಹಾಗೂ ಗ್ಯಾರಂಟಿ ಬಲಕ್ಕೆ ಬಿಜೆಪಿ ಪರಾಜಯ – ಉಮೇಶ್ ಮೇಟಿಗೆ ಭರ್ಜರಿ ಜಯ

ಬಾಗಲಕೋಟೆ: ದಶಕಗಳ ಕಾಲ ಜಿಲ್ಲೆಯ ರಾಜಕಾರಣದಲ್ಲಿ ಪಾರುಪತ್ಯ ಸಾಧಿಸಿದ್ದ ಹಿರಿಯ ನಾಯಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ಈ ಕದನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಬಿಜೆಪಿಯ ಹಿರಿಯ ನಾಯಕ ವೀರಣ್ಣ ಚರಂತಿಮಠ್ ಅವರ ವಿರುದ್ಧ 21,866 ಮತಗಳ ಬೃಹತ್ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೇ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. ಒಟ್ಟು 23 ಸುತ್ತುಗಳಲ್ಲಿ ನಡೆದ ಎಣಿಕೆ ಪ್ರಕ್ರಿಯೆಯಲ್ಲಿ ಉಮೇಶ್ ಮೇಟಿ ಅವರು 97,941 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ್ ಅವರು 76,075 ಮತಗಳನ್ನು ಪಡೆಯಲಷ್ಟೇ ಶಕ್ತರಾದರು. 21ನೇ ಸುತ್ತಿನ ಅಂತ್ಯಕ್ಕಾಗಲೇ ಉಮೇಶ್ ಮೇಟಿ ಅವರ ಗೆಲುವು ಅಧಿಕೃತಗೊಂಡಿತ್ತು.
ಈ ಬಾರಿಯ ಉಪಚುನಾವಣೆಯ ಗೆಲುವು ಕಾಂಗ್ರೆಸ್ ಪಾಲಿಗೆ ಅತ್ಯಂತ ಪ್ರತಿಷ್ಠಿತವಾಗಿತ್ತು. ಈ ಫಲಿತಾಂಶದ ಹಿಂದೆ ಪ್ರಮುಖವಾಗಿ ಮೂರು ಅಂಶಗಳು ಕೆಲಸ ಮಾಡಿರುವುದು ಸ್ಪಷ್ಟವಾಗಿದೆ:
ಅನುಕಂಪದ ಅಲೆ: ಮಾಜಿ ಸಚಿವ ಎಚ್.ವೈ. ಮೇಟಿ ಅವರ ನಿಧನದ ನಂತರ ಅವರ ಪುತ್ರನಿಗೆ ಟಿಕೆಟ್ ನೀಡಲಾಗಿತ್ತು. ತಂದೆಯ ಮೇಲಿದ್ದ ಪ್ರೀತಿ ಹಾಗೂ ಅನುಕಂಪವು ಉಮೇಶ್ ಮೇಟಿ ಅವರ ಪರವಾಗಿ ಮತಗಳಾಗಿ ಪರಿವರ್ತನೆಯಾಗಿವೆ.
ಸಿಎಂ ಸಿದ್ದರಾಮಯ್ಯ ಅವರ ತಂತ್ರಗಾರಿಕೆ: ತಮ್ಮ ಆಪ್ತ ಗೆಳೆಯ ಎಚ್.ವೈ. ಮೇಟಿ ಅವರ ಪುತ್ರನ ಗೆಲುವಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದಾಗಿ ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದ್ದರು. ಸಚಿವರ ದಂಡೇ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದು ಕೈ ಪಾಳಯಕ್ಕೆ ವರದಾನವಾಯಿತು.
ಗ್ಯಾರಂಟಿ ಯೋಜನೆಗಳ ಪ್ರಭಾವ: ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಮೇಲೆ ಬೀರಿದ ಪ್ರಭಾವವು ಕಾಂಗ್ರೆಸ್ ಅಭ್ಯರ್ಥಿಯ ಮತಗಳಿಕೆಯನ್ನು ಹೆಚ್ಚಿಸಿದೆ.ಬಿಜೆಪಿಗೆ ಹಿನ್ನಡೆಕ್ಷೇತ್ರದಲ್ಲಿ ಪ್ರಭಾವಿ ನಾಯಕರಾಗಿದ್ದರೂ ವೀರಣ್ಣ ಚರಂತಿಮಠ್ ಅವರು ಕಾಂಗ್ರೆಸ್ ಅಲೆಯ ಮುಂದೆ ಮಂಕಾದರು. ಅಂಚೆ ಮತ ಪತ್ರಗಳ ಎಣಿಕೆಯಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಬಿಜೆಪಿಯ ತಂತ್ರಗಾರಿಕೆಗಳು ಈ ಬಾರಿ ಫಲ ನೀಡಲಿಲ್ಲ. ಇದು ಕ್ಷೇತ್ರದ ಜನತೆಯ ಹಾಗೂ ನನ್ನ ತಂದೆಯವರು ಮಾಡಿರುವ ಜನಸೇವೆಯ ಗೆಲುವು. ಸಿಎಂ ಸಿದ್ದರಾಮಯ್ಯ ಅವರ ಮಾರ್ಗದರ್ಶನ ಮತ್ತು ಕಾರ್ಯಕರ್ತರ ಶ್ರಮಕ್ಕೆ ಸಂದ ಜಯ ಎಂದು ನೂತನ ಶಾಸಕ ಉಮೇಶ್ ಮೇಟಿ ವಿಜಯೋತ್ಸವದ ವೇಳೆ ಹರ್ಷ ವ್ಯಕ್ತಪಡಿಸಿದರು.
ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಬಾಗಲಕೋಟೆ ನಗರದಾದ್ಯಂತ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.