ಡೈಲಿವಾರ್ತೆ: 04/ಮೇ/2026

ಬಂಟ್ವಾಳ ಪೊಲೀಸರ ಭರ್ಜರಿ ಕಾರ್ಯಚರಣೆ: ದ.ಕ. ಜಿಲ್ಲೆಯ‌ಲ್ಲಿ ಪ್ರಪ್ರಥಮ ಬಾರಿಗೆ 42 ಲಕ್ಷ 30 ಸಾವಿರ ಮೌಲ್ಯದ ಡ್ರಗ್ಸ್ ವಶ

ಬಂಟ್ವಾಳ : ತಾಲೂಕಿನ ಮಂಚಿ ಎಂಬಲ್ಲಿ ಸುಮಾರು 42.30 ಲಕ್ಷ ಮೌಲ್ಯದ 423 ಗ್ರಾಂ ಬೃಹತ್ ಪ್ರಮಾಣದ ನಿಷೇಧಿತ ಎಂ.ಡಿ.ಎಂ.ಎ ಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿತರನ್ನು ಬೋಳಂತೂರು ಗ್ರಾಮದ ಎನ್.ಸಿ ರೋಡ್ ನಿವಾಸಿ ಮಹಮ್ಮದ್ ನಿಝಾಮುದ್ದೀನ್ ಹಾಗೂ ಈತನ ಸಹೋದರ ಮಹಮ್ಮದ್ ಸಾಹೀಮ್ ಎಂದು ಗುರುತಿಸಲಾಗಿದೆ. ಹಾಗೂ ಡ್ರಗ್ಸ್ ಸಾಗಾಟಕ್ಕೆ ಬಳಸಲಾದ ವಾಹನ, 3 ಮೊಬೈಲ್ ಗಳು ಸೇರಿದಂತೆ ಒಟ್ಟು ಸುಮಾರು 47 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದ.ಕ‌ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ ಹಾಗೂ ಹೆಚ್ಚುವರಿ‌ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಬೂಮರಡ್ಡಿ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪ ವಿಭಾಗದ‌ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ ರವರ ನೇತೃತ್ವದ ತಂಡದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ, ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಮಂಜುನಾಥ್ ಟಿ, ಬಂಟ್ವಾಳ ನಗರ ಠಾಣಾ ಪಿ.ಎಸ್.ಐ ಸಂದೀಪ್ ಶೆಟ್ಟಿ, ಹಾಗೂ ಸಿಬ್ಬಂದಿಗಳಾದ ನಝೀರ್, ಲೋಕೇಶ್, ಪ್ರಶಾಂತ್, ಶೇಖರ್, ವಿಜಯ ಕುಮಾರ್, ಕುಮಾರ್ ಹೆಚ್ ಕೆ, ವಿವೇಕ್ ರೈ, ನಾಗನಾಥ, ಸುರೇಶ್‌ ಉಪ್ಪಾರ್, ಬಸವರಾಜ್, ಮಹಾದೇವ್, ಜಗದೀಶ್ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಂಪತ್, ದಿವಾಕರ್ ರವರು ಕಾರ್ಯಾಚರಣೆ ನಡೆಸಿರುತ್ತಾರೆ .