ಡೈಲಿವಾರ್ತೆ: 05/ಮೇ/2026

ಕೋಟ: ಪಂಚವರ್ಣದ 300ನೇ ವಾರದ ಸಮುದ್ರ ತಟ ಸ್ವಚ್ಛತಾ ಅಭಿಯಾನಕ್ಕೆ ಸಂಸದ ಕೋಟ ಅವರಿಂದ ಚಾಲನೆ – 1,770 ಕೆ.ಜಿ ತ್ಯಾಜ್ಯ ಮುಕ್ತಗೊಳಿಸಿ ನವ ಇತಿಹಾಸ ಬರೆದ ಬೃಹತ್ ಸ್ವಚ್ಛತಾ ಅಭಿಯಾನ

​ಕೋಟ: ಸುಸ್ಥಿರ ಪರಿಸರ ಮತ್ತು ಸ್ವಚ್ಛತೆಯ ಸಂಕಲ್ಪದೊಂದಿಗೆ ಕಳೆದ 300 ವಾರಗಳಿಂದ ನಿರಂತರವಾಗಿ ನಡೆಯುತ್ತಿರುವ ಕೋಟದ ‘ಪಂಚವರ್ಣ’ ಸಂಸ್ಥೆಯ ಸಮುದ್ರ ತಟ ಸ್ವಚ್ಛತಾ ಅಭಿಯಾನವು ಭಾನುವಾರ ದಾಖಲೆ ಬರೆದಿದೆ.

ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಈ ಬೃಹತ್ ಅಭಿಯಾನಕ್ಕೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.​ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪಂಚವರ್ಣ ಸಂಘಟನೆಯು ಸತತ 300 ವಾರಗಳ ಕಾಲ ಸ್ವಚ್ಛತಾ ಕಾರ್ಯವನ್ನು ನಡೆಸಿರುವುದು ಇಡೀ ರಾಜ್ಯಕ್ಕೆ ಮಾದರಿ ಮತ್ತು ನನ್ನ ಜೀವನದಲ್ಲಿ ಕಂಡ ಅಪರೂಪದ ಶಿಸ್ತಿನ ಕಾರ್ಯಕ್ರಮ. ಹೆದ್ದಾರಿಗಳಲ್ಲಿ ಕಸ ಎಸೆಯುವ ಪ್ರವೃತ್ತಿ ಅತ್ಯಂತ ಹೀನಾಯವಾದುದು. ಉಡುಪಿ ಜಿಲ್ಲೆಯು ಸ್ವಚ್ಛತೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಶೀಘ್ರದಲ್ಲೇ ದೇಶದಲ್ಲೇ ಮೊದಲ ಸ್ಥಾನಕ್ಕೇರಲಿದೆ ಎಂದು ಆಶಯ ವ್ಯಕ್ತಪಡಿಸಿದರು.​

ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್ ಮಾತನಾಡಿ ಈ ಅಭಿಯಾನವು ಜಿಲ್ಲೆಯ ಸ್ವಚ್ಛತಾ ಆಂದೋಲನಕ್ಕೆ ಹೊಸ ದಿಕ್ಕು ಮತ್ತು ಪ್ರೇರಣೆ ನೀಡಿದೆ ಎಂದರು.

ಇದೇ ವೇಳೆ 300ನೇ ವಾರದ ಅಭಿಯಾನವನ್ನು ಸಮಾಜ ಸೇವಕ ಆನಂದ್ ಸಿ. ಕುಂದರ್ ಅವರ ಜನ್ಮದಿನಕ್ಕೆ ಸಮರ್ಪಿಸಲಾಯಿತು. ನೂರು ವಾರಗಳ ಸ್ವಚ್ಛತಾ ಕಾರ್ಯ ಪೂರೈಸಿದ ಶ್ರೀನಿವಾಸ್ ಕುಂದರ್ ಅವರನ್ನು ಗೌರವಿಸಲಾಯಿತು.

5.5 ಕಿ.ಮೀ ವ್ಯಾಪ್ತಿ: 1,770 ಕೆ.ಜಿ ತ್ಯಾಜ್ಯ ಸಂಗ್ರಹ​ಕೋಡಿ ಹೊಸ ಬೆಂಗ್ರೆ ಲೈಟ್ ಹೌಸ್‌ನಿಂದ ಆರಂಭಗೊಂಡು ಸಾಲಿಗ್ರಾಮ, ಕೋಟತಟ್ಟು ಹಾಗೂ ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 5.5 ಕಿಲೋಮೀಟರ್ ಉದ್ದದ ಕಡಲತೀರದಲ್ಲಿ ಈ ಬೃಹತ್ ಅಭಿಯಾನ ನಡೆಯಿತು.

​ತ್ಯಾಜ್ಯದ ಪ್ರಮಾಣ: ಒಟ್ಟು 1,770 ಕೆ.ಜಿ (882 ಚೀಲಗಳು).​ಭಾಗವಹಿಸಿದವರು: 500ಕ್ಕೂ ಅಧಿಕ ಸ್ವಚ್ಛಾಗ್ರಹಿಗಳು.​ಸಂಘಟನೆಗಳು: ಎಂ.ಐ.ಟಿ ಮಣಿಪಾಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡ ಸೇರಿದಂತೆ 30ಕ್ಕೂ ಹೆಚ್ಚು ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಗಳು ಕೈಜೋಡಿಸಿದ್ದವು.​

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಉದಯ್ ಕುಮಾರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾ.ಪಂ ಇಒ ಇಬ್ರಾಹಿಂಪುರ, ಡಾ. ಕೃಷ್ಣ ಕಾಂಚನ್ ಹಾಗೂ ವಿವಿಧ ಪಂಚಾಯತ್‌ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.​ರವೀಂದ್ರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುಜಾತ ಬಾಯರಿ ಸ್ವಾಗತಿಸಿದರು, ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ,

ರವೀಂದ್ರ ಕೋಟ ವಂದಿಸಿದರು. ಕರಾವಳಿ ಕಾವಲು ಪಡೆ ಮತ್ತು ಪೊಲೀಸ್ ಇಲಾಖೆಯ ಬಿಗಿ ಬಂದೋಬಸ್ತ್ ನಡುವೆ ರಾಜ್ಯದಲ್ಲೇ ಮೊದಲ ಬಾರಿಗೆ ಇಷ್ಟು ಸುದೀರ್ಘ ವ್ಯಾಪ್ತಿಯ ಬೀಚ್ ಕ್ಲೀನಿಂಗ್ ಯಶಸ್ವಿಯಾಗಿ ಸಂಪನ್ನಗೊಂಡಿತು.