



ಡೈಲಿವಾರ್ತೆ: 05/ಮೇ/2026

ಕಾರ್ಕಳ: ಆಯುರ್ವೇದ ಚಿಕಿತ್ಸೆಯಿಂದ ಕ್ಯಾನ್ಸರ್ ಗುಣಪಡಿಸುವುದಾಗಿ ನಂಬಿಸಿ ವೃದ್ಧನಿಗೆ ₹12 ಲಕ್ಷ ವಂಚನೆ – ವಂಚಕರ ವಿರುದ್ಧ ಪ್ರಕರಣ ದಾಖಲು

ಕಾರ್ಕಳ, ಮೇ 5:
ಆಯುರ್ವೇದ ಚಿಕಿತ್ಸೆಯ ಹೆಸರಿನಲ್ಲಿ ರೋಗಿಣಿಯ ಆರೋಗ್ಯ ಸ್ಥಿತಿಯನ್ನು ದುರುಪಯೋಗಪಡಿಸಿ ಕೊಂಡು ವೃದ್ಧ ವ್ಯಕ್ತಿಯಿಂದ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪಿರ್ಯಾದಿದಾರರಾದ ರೊನಾಲ್ಡ್ ರೋಡ್ರಿಗಸ್ (68), ಬೆಳ್ಮಣ್ ಗ್ರಾಮ ನಿವಾಸಿ, ತಮ್ಮ ಪತ್ನಿ ರೋಸಿ ಅವರು ಕ್ಯಾನ್ಸರ್ ಮತ್ತು ಪಾರ್ಶ್ವವಾಯು ರೋಗಗಳಿಂದ ಬಳಲುತ್ತಿದ್ದ ಹಿನ್ನೆಲೆ, ದಿನಾಂಕ 23 ಮಾರ್ಚ್ 2026ರಂದು ಅವರನ್ನು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಫಿಸಿಯೋಥೆರಪಿ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದರು.
ಈ ವೇಳೆ ಉಡುಪಿಯ ಕಡಿಯಾಳಿ ದೇವಸ್ಥಾನದ ಸಮೀಪ ಸಿದ್ದಾರ್ಥ್ ಎಂಬ ವ್ಯಕ್ತಿಯ ಪರಿಚಯವಾಗಿದ್ದು, ಆತನು ತನ್ನ ತಾಯಿಯೂ ಇದೇ ರೋಗದಿಂದ ಬಳಲಿದ್ದು ಆಯುರ್ವೇದ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ ಎಂದು ನಂಬಿಕೆ ಮೂಡಿಸಿದ್ದಾನೆ.
ಇದರ ಮುಂದುವರಿದಂತೆ, ಸಿದ್ದಾರ್ಥ್ ಎಂಬಾತ ಮಾಧವ ಎಂಬ ಮತ್ತೊಬ್ಬ ವ್ಯಕ್ತಿಯ ಸಂಪರ್ಕ ನೀಡಿದ್ದು, ಆತನು ದುಬಾರಿ ಆಯುರ್ವೇದ ಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿ ಹಣ ವರ್ಗಾವಣೆ ಮಾಡಿಸುವಂತೆ ಪಿರ್ಯಾದಿದಾರರನ್ನು ಪ್ರೇರೇಪಿಸಿದ್ದಾನೆ. ಮೊದಲಿಗೆ ಗೂಗಲ್ ಪೇ ಮೂಲಕ ಅನಿಲ್ ಪವಾರ್ ಹೆಸರಿನ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದ್ದು, ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ನಗದು ಹಣದ ಬೇಡಿಕೆ ಇಟ್ಟು ₹40,000ವನ್ನು ನೇರವಾಗಿ ಸಿದ್ದಾರ್ಥ್‌ಗೆ ನೀಡಲಾಗಿದೆ.
ನಂತರ ಉಡುಪಿಯ ಮಾಂಡವಿ ಬಿಲ್ಡಿಂಗ್‌ನಲ್ಲಿರುವ ಆಯುರ್ವೇದ ಔಷಧಿ ಅಂಗಡಿಗೆ ಕರೆದುಕೊಂಡು ಹೋಗಿ, ಅನಿಲ್ ಎಂಬಾತನ ಪರಿಚಯ ಮಾಡಿಸಿ, ಔಷಧಿಗಳ ಮೂಲಕ ಸಂಪೂರ್ಣ ಗುಣಮುಖತೆ ಸಾಧ್ಯವೆಂದು ನಂಬಿಕೆ ಮೂಡಿಸಲಾಗಿದೆ.
ಈ ನಂಬಿಕೆಯಲ್ಲಿ ಪಿರ್ಯಾದಿದಾರರಿಂದ ಒಟ್ಟು ₹10,80,000 ಹಣವನ್ನು ವಿವಿಧ ಚೆಕ್‌ಗಳ ಮೂಲಕ ಪಡೆದುಕೊಳ್ಳಲಾಗಿದೆ.
ಆದರೆ ನೀಡಲಾದ ಔಷಧಿಗಳನ್ನು ಬಳಸಿದರೂ ರೋಗಿಣಿಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಾರದ ಹಿನ್ನೆಲೆಯಲ್ಲಿ, ಆರೋಪಿಗಳ ಸಂಪರ್ಕ ಸಂಖ್ಯೆಗೆ ಕರೆ ಮಾಡಿದಾಗ ಅವುಗಳು ಸ್ವಿಚ್ ಆಫ್ ಆಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಪಿರ್ಯಾದಿದಾರರು ಪೊಲೀಸರಿಗೆ ದೂರು ನೀಡಿದ್ದಾರೆ.
ಒಟ್ಟು ₹12,09,160 ರೂಪಾಯಿಗಳನ್ನು ವಂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ZERO FIR ನಂ. 01/2026 ಅಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(2), 318(4) ಪ್ರಕಾರ ಪ್ರಕರಣ ದಾಖಲಿಸಲಾಗಿದೆ.