ಡೈಲಿವಾರ್ತೆ: 09/ಮೇ/2026

ಕೊಕ್ಕರ್ಣೆ: ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಅದ್ದೂರಿ ಶಿಲಾನ್ಯಾಸ​

ಕೊಕ್ಕರ್ಣೆ: ಸ್ಥಳೀಯ ಕೃಷಿಕರ ಹಾಗೂ ಗ್ರಾಹಕರ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ, ಕೊಕ್ಕರ್ಣೆ ಇದರ ಪ್ರಧಾನ ಕಛೇರಿ ಹಾಗೂ ಕೊಕ್ಕರ್ಣೆ ಶಾಖೆಯ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭವು ಶುಕ್ರವಾರ (ಮೇ 8, 2026) ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.

ವೇದಮೂರ್ತಿ ಬಿ. ಸೀತಾರಾಮ ಅಡಿಗ ಹಲುವಳ್ಳಿ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಸಂಘದ ಅಭಿವೃದ್ಧಿ ಹಾಗೂ ಭವಿಷ್ಯದ ದೃಷ್ಟಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಸಹಕಾರಿ ಕ್ಷೇತ್ರದ ಗಣ್ಯರು ಸಾಕ್ಷಿಯಾದರು.

ಸಂಘದ ಏಳಿಗೆಯಲ್ಲಿ ಶ್ರಮಿಸಿದ ಮತ್ತು ಹಿರಿಯ ಸದಸ್ಯರಾದ ಗಿರೀಶ ಉಡುಪ ಕೋಟಿಂಬೈಲು, ಹೀರಾ ಶ್ರೀನಿವಾಸ ಹೆಗ್ಡೆ ಕೊಕ್ಕರ್ಣೆ, ಅನಂತಯ್ಯ ಶ್ಯಾನುಭಾಗ್ ಕೊಕ್ಕರ್ಣೆ, ಸಿ.ಎ ರಘುರಾಮ್ ಎಮ್.ಹೆಚ್ (ಪಂಚಾಕ್ಷರಿ ಕ್ಯಾಶೂಸ್ ಬೈದೆಬೆಟ್ಟು), ಆನಂದ ನಾಯ್ಕ ಗೌರಿಬೆಟ್ಟು ಕೊಕ್ಕರ್ಣೆ, ಆನಂದ ನಾಯ್ಕ ಸಂತೆಕಟ್ಟೆ, ಕೃಷ್ಣ ಪೂಜಾರಿ ಮಾರಾಳಿ ಗರಡಿ ಮತ್ತು ಕೃಷ್ಣ ಕುಲಾಲ ಅವರ್ಸೆ ಅವರುಗಳು ಸಮೂಹ ಶಿಲಾನ್ಯಾಸವನ್ನು ನೆರವೇರಿಸಿದರು.

ಸಂಘದ ಅಧ್ಯಕ್ಷರಾದ ಬಿ. ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ವಂಡಾರು ಉಪಸ್ಥಿತರಿದ್ದರು. ಸಂಘದ ನೂತನ ಕಟ್ಟಡವು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿದ್ದು, ಗ್ರಾಹಕರಿಗೆ ಮತ್ತು ರೈತರಿಗೆ ಮತ್ತಷ್ಟು ಉತ್ತಮ ಸೇವೆ ನೀಡಲು ಪೂರಕವಾಗಲಿದೆ ಎಂದು ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಲಾಯಿತು.​

ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ನಿರ್ದೇಶಕರುಗಳು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ಅಪಾರ ಸಂಖ್ಯೆಯ ಸದಸ್ಯರು ಮತ್ತು ಗ್ರಾಹಕರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.